ಬಾಗಲಕೋಟೆ: ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಧೃಡಪಟ್ಟಿದ್ದು, ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದೆ.
ಬಾಗಲಕೋಟೆ ನಗರದ ಹಳೆಪೇಟೆಯ 70 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ಸೋಂಕು ತಗುಲಿದೆ. ಎರಡು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ಗುರುವಾರ ಧೃಡಪಟ್ಟಿದೆ ಎಂದು ಜಿಲ್ಲಾಕಾರಿ ಕ್ಯಾ.ಡಾ.ರಾಜೇಂದ್ರ ಖಚಿತಪಡಿಸಿದ್ದಾರೆ.
ಟ್ರಾವೆಲ್ ಹಿಸ್ಟರಿಯಿಲ್ಲ
ಸೋಂಕಿತ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯಿಲ್ಲ, ಆದರೆ ಇವರ ಪುತ್ರ ಇತ್ತೀಚೆಗೆ ಬೆಂಗಳೂರಿನಿಂದ ಆಗಮಿಸಿದ್ದರು ಎಂದು ಹೇಳಲಾಗಿದೆ. ಕುಟುಂಬದವರಿಗೂ ಸೋಂಕು ತಗುಲಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನಾಲ್ವರನ್ನು ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಈ ನಾಲ್ವರ ರಕ್ತ ಹಾಗೂ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿಕೊಡಲು ವೈದ್ಯರು ನಿರ್ಧರಿಸಿದ್ದಾರೆ.
70 ವರ್ಷದ ವ್ಯಕ್ತಿಗೆ ಇತ್ತೀಚೆಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮೊದಲು ಖಾಸಗಿ ಆಸ್ಪತ್ರೆಯಲ್ಲೂ ದಾಖಲಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಂಕಿತ ವ್ಯಕ್ತಿ ಎಣ್ಣೆ ಅಂಗಡಿಯೊಂದನ್ನು ಹೊಂದಿದ್ದು, ಇವರಿಂದ ಸೋಂಕು ತಗುಲಿರಬಹುದಾದ ವ್ಯಕ್ತಿಗಳ ಪತ್ತೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮೀಕ್ಷೆ ಆರಂಭಿಸಿದೆ. ಇನ್ನು ಗ್ರಾಹಕರಿಂದಲೂ ವ್ಯಕ್ತಿಗೆ ಸೋಂಕು ತಗುಲಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಪ್ರದೇಶವೇ ಬಂದ್
ಇಡೀ ಬಾಗಲಕೋಟೆ ನಗರದಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಸೋಂಕಿತ ವ್ಯಕ್ತಿಯ ಮನೆಯ 100 ಮೀ. ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಜನರು ತೆರಳುವುದು ಹಾಗೂ ಪ್ರದೇಶದಿಂದ ಜನರು ಹೊರ ಹೋಗುವುದನ್ನು ನಿಷೇಸಲಾಗಿದೆ. ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದಿದ್ದಾರೆ. ಶುಕ್ರವಾರ ಬೆಳಗ್ಗೆ ಹಾಲು, ಪತ್ರಿಕೆ, ದಿನಸಿ ವಸ್ತು, ತರಕಾರಿಯನ್ನು ಜಿಲ್ಲಾಡಳಿತದಿಂದಲೇ ವಿತರಿಸಲು ನಿರ್ಧರಿಸಲಾಗಿದೆ. ಪೊಲೀಸರು ಕೂಡ ಸೋಂಕಿತರಾಗಿರಬಹುದಾದ ವ್ಯಕ್ತಿಗಳ ಪತ್ತೆಗಾಗಿ ಶೋಧನೆ ಆರಂಭಿಸಿದ್ದಾರೆ.
ಕೋವಿಡ್ ಆಸ್ಪತ್ರೆ
“ಜಿಲ್ಲೆಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ವರದಿಯಾಗಿದೆ, ಸೋಂಕಿತನ ಮನೆಯಿರುವ ಪ್ರದೇಶದಲ್ಲಿ ಜನಸಂಚಾರ ಬಂದ್ ಮಾಡಲಾಗಿದೆ. ಇವರೊಂದಿಗೆ ಸಂಪರ್ಕವಿದ್ದ ಜನರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹಳೆಯ ಬಾಗಲಕೋಟೆಯಲ್ಲಿ ಮಾರುಕಟ್ಟೆ ಬಂದ್ ಮಾಡಲಾಗಿದೆ.”-ಕ್ಯಾ.ಡಾ.ರಾಜೇಂದ್ರ, ಜಿಲ್ಲಾಕಾರಿ
ಜಿಲ್ಲೆಯಲ್ಲಿ ಒಂದು ಕೊರೊನಾ ಕೇಸ್ ದೃಢಪಟ್ಟಿರುವುದರಿಂದ ಇಡೀ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತದೆ. 250 ಬೆಡ್ಗಳನ್ನು ಕೋವಿಡ್ ರೋಗಿಗಳಿಗಾಗಿಯೇ ಮೀಸಲಿಡಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರಾಗಿ ಒಂದು ವಾರ್ಡ್, ಶಂಕಿತರಿಗಾಗಿ ಒಂದು ವಾರ್ಡ್ ಹಾಗೂ ಐಸೋಲೇಶನ್ಗಾಗಿ ಒಂದು ವಾರ್ಡ್ ನಿಗದಿಗೊಳಿಸಲಾಗಿದೆ. ಸಾಮಾನ್ಯ ಕಾಯಿಲೆಯುಳ್ಳ ರೋಗಿಗಳನ್ನು ಕುಮಾರೇಶ್ವರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಳೆಯ ನಗರದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಶುಕ್ರವಾರದಿಂದ ಯಾವುದೇ ವಹಿವಾಟು ನಡೆಯುವುದಿಲ್ಲ.
ಜಿಲ್ಲಾಕಾರಿ ಕ್ಯಾ.ಡಾ.ರಾಜೇಂದ್ರ, ಎಸ್ಪಿ ಲೋಕೇಶ್ ಜಗಲಾಸರ್ ಬುಧವಾರ ರಾತ್ರಿ ಸೋಂಕಿತ ವ್ಯಕ್ತಿಯ ಮನೆಯ ಪ್ರದೇಶಕ್ಕೆ ಭೇಟಿ ನೀಡಿ ಬಂದೋಬಸ್ತ್ ವೀಕ್ಷಿಸಿದರು.
ಪ್ರತ್ಯೇಕ ಘಟನೆಯಲ್ಲಿ ಬಾಗಲಕೋಟೆ ನವನಗರದ 45ನೇ ಸೆಕ್ಟರ್ನಲ್ಲಿ ಲಾಕ್ಡೌನ್ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದ 7 ಜನರನ್ನು ಬಂಧಿಸಲಾಗಿದೆ. ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಏಳು ಜನರನ್ನು ಬಂಧಿಸಲಾಗಿದ್ದು ನವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
Comments are closed.