ಕರ್ನಾಟಕ

ಮನೆಯಲ್ಲೇ ಕುಳಿತು ಪರೀಕ್ಷಿಸುವ ಕೊರೊನಾ ಹೋಂ ಸ್ಕ್ರೀನಿಂಗ್‌ ಟೆಸ್ಟ್‌ ಕಿಟ್‌ ಬಿಡುಗಡೆ

Pinterest LinkedIn Tumblr


ಬೆಂಗಳೂರು: ಕೊರೊನಾ ವಿರುದ್ಧ ಇಡೀ ಜಗತ್ತು ಶಕ್ತಿಮೀರಿ ಹೋರಾಡುತ್ತಿರುವುದರ ನಡುವೆ ಬೆಂಗಳೂರು ಮೂಲದ ಕಂಪನಿಯೊಂದು ಮನೆಯಲ್ಲೇ ಕುಳಿತು ಕ್ಷಿಪ್ರವಾಗಿ ಕೋವಿಡ್‌ ಪರೀಕ್ಷಿಸುವ ಹೋಂ ಸ್ಕ್ರೀನಿಂಗ್‌ ಟೆಸ್ಟ್‌ ಕಿಟ್‌ ಬಿಡುಗಡೆ ಮಾಡಿದೆ. ‘ಬಯೋನ್‌’ ಎನ್ನುವ ಸ್ಟಾರ್ಟ್‌ಪ್‌ ಈ ಟೆಸ್ಟ್‌ ಕಿಟ್‌ ಬಿಡುಗಡೆ ಮಾಡಿದೆ.

ಸುಲಭವಾಗಿ ಬಳಸಬಹುದಾದ ಈ ಕಿಟ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಅನುಮೋದನೆ ನೀಡಿದೆ.

ಕೇವಲ 10 ನಿಮಿಷದಲ್ಲಿ ಫಲಿತಾಂಶ
ಕೋವಿಡ್‌ ಪರೀಕ್ಷಿಸಲು ಅಲ್ಕೋಹಾಲ್‌ ಸ್ವಾಬ್‌ನಿಂದ ಬೆರಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ಬೆರಳ ತುದಿಯಿಂದ ಒಂದು ಹನಿ ರಕ್ತ ತೆಗೆದುಕೊಂಡು ಅದನ್ನು ಟೆಸ್ಟ್‌ ಕಿಟ್‌ ಮೇಲೆ ಹಾಕಿದರೆ 5ರಿಂದ 10 ನಿಮಿಷಗಳಲ್ಲಿ ಫಲಿತಾಂಶ ಬರುತ್ತದೆ. ಬೆರಳು ಸ್ವಚ್ಛಗೊಳಿಸಿಕೊಳ್ಳಲು, ರಕ್ತ ತೆಗೆಯಲು ಮತ್ತು ಅದನ್ನು ಕಿಟ್‌ನ ಒಳಗೆ ಹಾಕಲು ಬೇಕಾದ ಸಾಧನಗಳು ಹಾಗೂ ಬಳಕೆ ಕುರಿತು ಗೈಡ್‌ ಕಿಟ್‌ ಒಳಗೆ ಇರುತ್ತದೆ.

ಐದತ್ತು ನಿಮಿಷಗಳಲ್ಲಿ ಬಂದ ಫಲಿತಾಂಶದಲ್ಲಿ ಕೊರೊನಾ ಪಾಸಿಟಿವ್‌ ಇದ್ದಲ್ಲಿಆರೋಗ್ಯ ಇಲಾಖೆಯ ಫೋನ್‌ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿ ಮತ್ತೊಮ್ಮೆ ಪರೀಕ್ಷೆಗೆ ಒಳಪಡಬೇಕು. ಈ ಅವಧಿಯಲ್ಲಿ ಕುಟುಂಬ ಸೇರಿದಂತೆ ಎಲ್ಲರಿಂದಲೂ ಪ್ರತ್ಯೇಕವಾಗಿ ಇರಬೇಕು. ಹೋಂ ಟೆಸ್ಟ್‌ ಕಿಟ್‌ ಅನ್ನು ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಪಡೆದುಕೊಳ್ಳಬಹುದಾಗಿದೆ. ಟೆಸ್ಟ್‌ ಕಿಟ್‌ನ ಬೆಲೆ 2 ಸಾವಿರ ರೂ.ಗಳಿಂದ 3 ಸಾವಿರ ರೂ.ವರೆಗೆ ಇದೆ ಎಂದು ಬಯೋನ್‌ ಕಂಪನಿ ತಿಳಿಸಿದೆ.

ಸೋಂಕು ಹರಡುವಿಕೆ ತಡೆಯುವಲ್ಲಿ ಸಹಕಾರಿ
ಕೋವಿಡ್‌-19 ನಿಯಂತ್ರಣಕ್ಕೆ ಶಂಕಿತರು ಹಾಗೂ ಸೋಂಕು ಕಾಣಿಸಿಕೊಂಡಿರುವ ಪ್ರದೇಶದಲ್ಲಿ ಸಾಮೂಹಿಕವಾಗಿ ಟೆಸ್ಟ್‌ ಮಾಡಿಸಬೇಕು. ಸೋಂಕು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ಒಳಪಡಿಸಬೇಕು. ಈ ಕೆಲಸ ಎಷ್ಟು ವೇಗವಾಗಿ ಆಗುವುದೋ ಅಷ್ಟು ಬೇಗ ಸೋಂಕು ನಿಯಂತ್ರಣಕ್ಕೆ ಬರುತ್ತದೆ. ಮತ್ತಷ್ಟು ಜನರಿಗೆ ಸೋಂಕು ಹಬ್ಬುವುದು ನಿಯಂತ್ರಣಕ್ಕೆ ಬರುತ್ತದೆ ಎಂದು ಕಂಪನಿಯ ಸಿಇಓ ಸುರೇಂದ್ರ ಚಿಕಾರ ತಿಳಿಸಿದ್ದಾರೆ.

Comments are closed.