ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದಲ್ಲಿ ಆರ್ಥಿಕ ಹಿನ್ನಡೆ ಉಂಟಾಗುತ್ತಿದ್ದು ಐಟಿ ವಲಯಗಳು ಸೇರಿದಂತೆ ಉದ್ಯಮ ಕ್ಷೇತ್ರಗಳು ಕಂಗಾಲಾಗಿವೆ. ಉದ್ಯೋಗ ಹಾಗೂ ವೇತನ ಕಡಿತದ ಭೀತಿ ಈ ಕ್ಷೇತ್ರದಲ್ಲಿ ದುಡಿಯುವ ನೌಕರರಲ್ಲಿ ಆವರಿಸಿದೆ. ಸಣ್ಣ ಹಾಗೂ ಮಧ್ಯಮ ವಲಯದ ಕೆಲವು ಐಟಿ ಆಧಾರಿತ ಕಂಪನಿಗಳು ಉದ್ಯೋಗವನ್ನು ಕಡಿತಗೊಳಿಸುವ ಸೂಚನೆಯನ್ನು ನೀಡಿದ್ದು ನೌಕರರಲ್ಲಿ ಆತಂಕ ಮೂಡಿಸಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ಸಣ್ಣ, ಮಧ್ಯಮ ವರ್ಗದ ಕೈಗಾರಿಕೆಗಳು ಹಾಗೂ ಸ್ಟಾರ್ಟಪ್ ಕಂಪನಿಗಳ ಮೇಲೆ ಭಾರೀ ಪರಿಣಾಮ ಉಂಟುಮಾಡುತ್ತಿದೆ. ಉತ್ಪಾದನೆ ಸ್ಥಗಿತಗೊಂಡಿದ್ದು, ಸಮಸ್ಯೆ ಬಗೆಹರಿಯಲು ಇನ್ನೂ ಮೂರು ನಾಲ್ಕು ತಿಂಗಳ ಕಾಲಾವಕಾಶದ ಅಗತ್ಯವಿದೆ.
ಕೆಲವು ಕಂಪನಿಗಳು ವರ್ಕ್‌ಫ್ರಂಮ್ ಹೋಂಗೆ ಅವಕಾಶ ಕಲ್ಪಿಸಿವೆ. ಆದರೆ ಬಹುತೇಕ ಉದ್ಯಮಗಳಲ್ಲಿ ಇದು ಸಾಧ್ಯವಾಗಲಿಲ್ಲ. ಇದೀಗ ಮತ್ತೆ ಲಾಕ್‌ಡೌನ್ ಮುಂದುವರಿದರೆ ಅದರ ಪರಿಣಾಮ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ನೌಕರರ ವೇತನ ಕಡಿತಗೊಳಿಸದಂತೆ ಹಾಗೂ ಉದ್ಯೋಗ ಕಡಿತಗೊಳಿಸದಂತೆ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆಯನ್ನು ಕಂಪನಿಗಳಿಗೆ ನೀಡಿದೆ. ಹೀಗಿದ್ದರೂ ಕೆಲವು ಐಟಿ ಆಧಾರಿತ ಕಂಪನಿಗಳು ವೇತನ ಕಡಿತಗೊಳಿಸಲು ಮುಂದಾಗಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಬೆಂಗಳೂರಿನ ಸುಮಾರು 30 ಐಟಿ ಆಧಾರಿತ ಕಂಪನಿಗಳು ತಮ್ಮ ನೌಕರರಿಗೆ ವೇತನ ಕಡಿತಗೊಳಿಸಿದೆ ಹಾಗೂ ಉದ್ಯೋಗದಿಂದ ತೆಗೆದು ಹಾಕುವ ಸೂಚನೆಯನ್ನು ನೀಡುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಕರ್ನಾಟಕ ರಾಜ್ಯ ಐಟಿ ಉದ್ಯೋಗಿಗಳ ಯೂನಿಯನ್ ಅಭಿಪ್ರಾಯಪಟ್ಟಿದೆ.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಇಂತಹ ಯಾವುದೇ ನಿರ್ಧಾರವನ್ನು ಉದ್ಯಮಗಳು ತೆಗೆದುಕೊಳ್ಳಬಾರದು ಎಂದು ಸರ್ಕಾರದ ನಿರ್ದೇಶನ ಇದ್ದರೂ, ಐಟಿ ಕಂಪನಿಗಳು ಇದನ್ನು ಪಾಲನೆ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಹಾಗೂ ಕಂಪನಿಗಳು ನೌಕರರಿಗೆ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರೆ ಅದಕ್ಕೆ ಒಪ್ಪಿಗೆ ಸೂಚಿಸಬಾರದು ಎಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಸಿ ಮನವಿ ಮಾಡಿಕೊಂಡಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಕರ್ನಾಟಕ ಕೈಗಾರಿಕಾ ಹಾಗೂ ವಾಣಿಜ್ಯ ಮಹಾಸಂಘ ( ಎಫ್‌ಕೆಸಿಸಿ) ಅಧ್ಯಕ್ಷ ಜನಾರ್ದನ “ ಕೊರೊನಾದಿಂದ ಉದ್ಯಮ ಕ್ಷೇತ್ರಕ್ಕೆ ಭಾರೀ ಪ್ರಮಾಣದ ಹೊಡೆತ ಬಿದ್ದಿದೆ. 15 ದಿನಗಳ ಲಾಕ್‌ಡೌನ್ ಅವಧಿಯಲ್ಲಿ 15,000 ವೇತನ ಇದ್ದವರಿಗೆ ಪೂರ್ಣ ವೇತನ ಪಾವತಿ ಮಾಡುತ್ತೇವೆ. 15 ರಿಂದ 50 ಸಾವಿರ ವೇತನ ಇದ್ದವರಿಗೆ ಶೇ. 50 ರಷ್ಟು ಪಾವತಿ ಮಾಡುತ್ತೇವೆ. 50 ಸಾವಿರಕ್ಕೂ ಅಧಿಕ ಸಂಬಳ ಇದ್ದವರಿಗೆ ವೇತನ ಪಾವತಿ ಮಾಡುವುದಿಲ್ಲ ಎಂದರು.
ಕೊರೊನಾದಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ನೌಕರರು ಸೇವೆ ಮಾಡಲಿ ಎಂದು ವಿನಂತಿಸಿದ ಅವರು, ಕೆಲಸ ಮಾಡದೇ ಇದ್ದಾಗ ವೇತನ ನೀಡಲು ಸಾಧ್ಯವಿಲ್ಲ. ಆದರೆ ಕೆಲಸದಿಂದ ಯಾರನ್ನೂ ತೆಗೆದು ಹಾಕುವ ಯೋಚನೆ ಉದ್ಯಮ ಕ್ಷೇತ್ರದಲ್ಲಿಲ್ಲ. ಯಾವುದೇ ಉದ್ಯೋಗ ಕಡಿತ ಇಲ್ಲ ಎಂಬ ಭರವಸೆ ನೀಡಿದರು.
ಒಟ್ಟಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ದುಡಿಯುವ ನೌಕಕರು ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವೇತನ ಕಡಿತದ ಜೊತೆಗೆ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿದೆ.
Comments are closed.