ಬೆಂಗಳೂರು(ಏ. 09): ಕೇಂದ್ರ ಸರ್ಕಾರ ಘೋಷಿಸಿರುವ ದೇಶವ್ಯಾಪಿ 21 ದಿನಗಳ ಲಾಕ್ ಡೌನ್ ಅವಧಿ ಏಪ್ರಿಲ್ 14ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ವೇಳೆ, ಲಾಕ್ ಡೌನ್ ಅನ್ನು ಯಾವ ರೀತಿ ತೆರವುಗೊಳಿಸಬೇಕು ಅಥವಾ ಸಡಿಲಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ವಿವಿಧ ತಜ್ಞರು ಮತ್ತು ರಾಜ್ಯ ಸರ್ಕಾರಗಳಿಂದ ಕೇಂದ್ರ ಸಲಹೆ ಯಾಚಿಸಿದೆ. ಬಿಎಸ್ವೈ ನೇತೃತ್ವ ರಾಜ್ಯ ಸರ್ಕಾರ ಕೂಡ ತಜ್ಞರಿಂದ ವರದಿ ಕೇಳಿತ್ತು. ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ಮೊದಲಾದವರು ಇರುವ ತಜ್ಞರ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ.
ಎಲ್ಲೆಡೆ ಲಾಕ್ ಡೌನ್ ಮುಂದುವರಿಸುವುದು ಸಮಂಜಸವಲ್ಲ. ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸಬೇಕು. ಪ್ರತೀ ಎರಡು ವಾರಕ್ಕೆ ಕಾರ್ಯತಂತ್ರ ರೂಪಿಸಬೇಕು ಎಂದು ಈ ಸಮಿತಿ ಅಭಿಪ್ರಾಯಪಟ್ಟಿದೆ.
ಸೋಂಕು ತೀವ್ರವಾಗಿದೆ ಎಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಲಾಕ್ ಡೌನ್ ಮುಂದುವರಿಸಬೇಕು. ಎಲ್ಲಾ ಕಡೆಯೂ ಮೇ 31ರವರೆಗೆ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರದ ನಿಯಮಗಳನ್ನ ಪಾಲನೆ ಮಾಡಬೇಕು. ಶಾಲಾ ಕಾಲೇಜುಗಳನ್ನ ಮುಚ್ಚಿ ಆನ್ಲೈನ್ನಲ್ಲಿ ಪಾಠ ಮಾಡಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ನಾರಾಯಣ ಹೆಲ್ತ್ ಸೆಂಟರ್ನ ಡಾ. ದೇವಿ ಶೆಟ್ಟಿ, ಜಯದೇವ ಹೃದ್ರೋಗ ಸಂಸ್ಥೆಯ ಡಾ. ಸಿಎನ್ ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ಸಿ ನಾಗರಾಜ್, ನಿಮ್ಹಾನ್ಸ್ನ ಡಾ. ವಿ ರವಿ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಡಾ. ಎಂ.ಕೆ. ಸುದರ್ಶನ್ ಅವರು ಈ ತಜ್ಞರ ಸಮಿತಿಯಲ್ಲಿದ್ದಾರೆ. ಇವರು ನೀಡಿರುವ ಪ್ರಮುಖ ಸಲಹೆಗಳು ಈ ಕೆಳಕಂಡಂತಿವೆ.
1) ಸ್ಥಳೀಯವಾಗಿ ಗುರುತಿಸಲ್ಪಟ್ಟ ಕೊರೋನಾ ಹಾಟ್ಸ್ಟಾಟ್ ಸ್ಥಳಗಳಲ್ಲಿ ಲಾಕ್ ಡೌನ್ ಮುಂದುವರಿಸುವುದು.
2) ಎಲ್ಲಾ ಸಾರ್ವಜನಿಕರು ಮೇ 31ರವರೆಗೆ ಸಾಮಾಜಿಕ ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು3) ಸಾರ್ವಜನಿಕ ಸ್ಥಳಗಳಲ್ಲಿ 4-6ಕ್ಕಿಂತ ಹೆಚ್ಚು ಜನರು ಗುಂಪುಗೂಡದಂತೆ ಇರುವುದು
4) ಸಾರ್ವಜನಿಕ ಸ್ಥಳಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹಾಕುವುದು; ಕೆಲ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮುಂದುವರಿಸುವುದು; ಪೊಲೀಸರ ಕಾರ್ಯಾಚರಣೆ ಯಥಾಪ್ರಕಾರ ಮುಂದುವರಿಯುವುದು
5) ಎಲ್ಲಾ ಅಗತ್ಯ ಸೇವೆಗಳ ಮುಂದುವರಿಕೆ
6) ಗ್ರಾಮೀಣ ಭಾಗದಲ್ಲಿ ಈಗ ಬಿತ್ತನೆ ಕಾಲ ಪ್ರಾರಂಭವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಅನುವು ಮಾಡಿಕೊಡುವುದು
7) ಏಪ್ರಿಲ್ 30ರವರೆಗೆ ಎಲ್ಲಾ ಜಿಮ್, ಬಾರ್, ಹೋಟೆಲ್, ಶಾಪಿಂಗ್ ಮಾಲ್, ಧಾರ್ಮಿಕ ಸ್ಥಳ, ಮನರಂಜನಾ ಸ್ಥಳ, ಥಿಯೇಟರ್, ವಿವಾಹ ಮತ್ತಿತರ ಸಮಾರಂಭ ಇತ್ಯಾದಿಯನ್ನು ಬಂದ್ ಮಾಡುವುದು.
8) ಸರಕು ಸಾಗಣೆ ಹೊರತುಪಡಿಸಿ ಅಂತಾರಾಜ್ಯ ಗಡಿಯಲ್ಲಿ ವಾಹನ ಸಂಚಾರ ಬಂದ್
9) ಹೆಚ್ಚು ಜನರು ಬಳಸುವ ಸಾಮಾನ್ಯ ಶೌಚಾಲಯದ ಬಳಕೆ ನಿಷೇಧ
10) ಹಿರಿಯ ನಾಗರಿಕರು ಕಟ್ಟುನಿಟ್ಟಾಗಿ ಮನೆಯಲ್ಲೇ ಉಳಿದುಕೊಳ್ಳುವುದು.
11) ಸರ್ಜಿಕಲ್ ಮಾಸ್ಕ್ ಬಳಕೆ ಬದಲು ಜನರು ಮನೆಯಲ್ಲೇ ಬಟ್ಟೆಯಿಂದ ಮೂರು ಎಳೆಯ ಮಾಸ್ಕ್ ಮಾಡಬಹುದು. ದುಪಟ್ಟಾ, ಕರ್ಚೀಫು ಇತ್ಯಾದಿಗಳನ್ನು ಮಾಸ್ಕ್ ರೀತಿ ಬಳಸಬಹುದು. ಒಮ್ಮೆ ಬಳಸಿದ ನಂತರ ಈ ಬಟ್ಟೆಯನ್ನು ಸೋಪಿನಿಂದ ಚೆನ್ನಾಗಿ ತೊಳೆದು ಒಣಗಿಸಿ ಐರನ್ ಮಾಡಿದ ಬಳಿಕವೇ ಮರುಬಳಕೆ ಮಾಡಬೇಕು.
12) ಸರಕು ಸಾಗಣೆ ಹೊರತಪಡಿಸಿ ಬೇರೆ ನಾಗರಿಕ ವಿಮಾನ ಪ್ರಯಾಣ, ಅಂತಾರಾಜ್ಯ ರೈಲು ಪ್ರಯಾಣದ ನಿಷೇಧ ಮುಂದುವರಿಸುವುದು. ಮುಂದಿನ ದಿನಗಳಲ್ಲಿ ವಿಮಾನ, ರೈಲು ಪ್ರಯಾಣ ಪ್ರಾರಂಭವಾದರೂ ಕೊರೋನಾ ಬಿಕ್ಕಟ್ಟು ಶಮನವಾಗುವವರೆಗೂ ಹಿರಿಯ ನಾಗರಿಕರು ಪ್ರಮಾಣ ಬೆಳೆಸದೇ ಇರುವುದು ಉತ್ತಮ.
13) ಏಪ್ರಿಲ್ 30ವರೆಗೆ ಮೆಟ್ರೋ ವ್ಯವಸ್ಥೆ ಬೇಡ; ಓಲಾ, ಊಬರ್ನಂತ ಟ್ಯಾಕ್ಸಿ ಸೇವೆ ಬಂದ್; ಇಪಾಸ್ ಇರುವ ಖಾಸಗಿ ಕಾರುಗಳ ಮಾಲೀಕರು ದಿನ ಬಿಟ್ಟು ದಿನ ನಿರ್ದಿಷ್ಟ ಅವಧಿಯಲ್ಲಿ ವಾಹನ ಚಲಾಯಿಸಬಹುದು;
14) ಎಸಿ ರಹಿತ ಬಸ್ಸುಗಳಿಗೆ ಅವಕಾಶ ನೀಡುವುದು. ಒಂದು ಸಾಲಿನಲ್ಲಿ ಒಬ್ಬ ಪ್ರಯಾಣಿಕರಿಗೆ ಕೂರಲು ಅವಕಾಶ ಕೊಡುವುದು.
15) ಜನರು ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಹೇಗೆ ಖರೀದಿಸಬೇಕು ಎಂಬುದನ್ನು ಆಯಾ ಪ್ರದೇಶಗಳ ಆಡಳಿತಗಳೇ ನಿರ್ಧರಿಸಬೇಕು. ಆದರೆ, ಜನರು ಸಾಮಾಜಿಕ ಅಂತರ ಪಾಲನೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
16) ಚಿವಿಂಗ್ ಗಮ್ ಮತ್ತು ಪಾನ್ ಅಭ್ಯಾಸವಿದ್ದವರು ಉಗುಳುವುದರಿಂದ ಇವರನ್ನು ನಿಷೇಧಿಸುವುದು.
17) ಆಹಾರ ಮತ್ತು ಇತರ ಸರಕಗಳನ್ನು ಸರಬರಾಜು ಮಾಡುವವರಿಗೆ ಐಡಿ ಕಾರ್ಡ್ ನೀಡಿ ಅನುಮತಿಸಬೇಕು. ಇದರಿಂದ ಸಾಮಾನ್ಯ ಜನರ ಓಡಾಟವನ್ನು ನಿಯಂತ್ರಿಸಬಹುದು.
18) ಮೇ 1ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಬಂದ್ ಮುಂದುವರಿಸುವುದು. ಆನ್ಲೈನ್ ಕ್ಲಾಸ್ಗೆ ಪ್ರೋತ್ಸಾಹ ನೀಡುವುದು; ಇದರಿಂದ ತಳಮಟ್ಟದಿಂದಲೇ ಆನ್ಲೈನ್ ಶಿಕ್ಷಣಕ್ಕೆ ಸುಧಾರಣೆ ಪ್ರಾರಂಭಿಸಲು ಅನುಕೂಲವಾಗುತ್ತದೆ.
19) ಐಟಿ, ಬಿಟಿ ಹಾಗೂ ಇತರ ವಾಣಿಜ್ಯ ಕಂಪನಿಗಳು ಸಾಧ್ಯವಾದಷ್ಟೂ ತಮ್ಮ ನೌಕರವರ್ಗಕ್ಕೆ ವರ್ಕ್ ಅಟ್ ಹೋಮ್ ಅವಕಾಶ ನೀಡಬೇಕು.
20) ಗಾರ್ಮೆಂಟ್ಸ್, ಕೈಗಾರಿಕೆ ಇತ್ಯಾದಿ ಸಂಘಟಿತ ವಲಯಗಳ ಉದ್ಯಮಗಳು ತೆರೆಯಬಹುದು. ಆದರೆ, ಶೇ. 50ರಷ್ಟು ಸಿಬ್ಬಂದಿವರ್ಗದವರಿಂದ ಕೆಲಸ ಮಾಡಿಸುವುದು. ಕೆಲಸ ಮಾಡುವ ಸಿಬ್ಬಂದಿಯನ್ನು ಪ್ರತೀ ವಾರ ಪಾಳಿಯ ರೀತಿಯಲ್ಲಿ ಬದಲಿಸುವುದು. ಇದರಿಂದ ಎಲ್ಲರಿಗೂ ಉದ್ಯೋಗ ಸಿಕ್ಕು ಸಂಬಳವೂ ಪ್ರಾಪ್ತಿಯಾಗುತ್ತದೆ.
21) ನಗರಗಳ ದೊಡ್ಡ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ವೈದ್ಯರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ ಇರುವಂತೆ ನೋಡಿಕೊಳ್ಳುವುದು. ಈ ವೈದ್ಯಕೀಯ ಸಿಬ್ಬಂದಿಗೆ ದಣಿವಾಗದ ರೀತಿಯಲ್ಲಿ ವಾರಕ್ಕೊಮ್ಮೆ ಬದಲಾವಣೆ ಮಾಡುವ ಕ್ರಮ ಅನುಸರಿಸುವುದು.
22) 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವೈದ್ಯರು ನೇರವಾಗಿ ರೋಗಿಗಳ ಸಂಪರ್ಕಕ್ಕೆ ಬರದ ರೀತಿಯಲ್ಲಿ ಯೋಜಿಸುವುದು.
23) ತೀವ್ರ ಪ್ರಮಾಣದಲ್ಲಿ ಸೋಂಕು ಇರುವ ರೋಗಿಗಳನ್ನು ಕೊರೋನಾ ಆಸ್ಪತ್ರೆಗೆ ದಾಖಲಿಸಬೇಕು. ಇಲ್ಲಿ ವೆಂಟಿಲೇಟರ್ ಇತ್ಯಾದಿ ಅಗತ್ಯ ಪರಿಕರಗಳ ವ್ಯವಸ್ಥೆ ಇದೆ. ತೀವ್ರತರವಿಲ್ಲದ ಸೋಂಕಿನ ಲಕ್ಷಣ ಇದ್ದರೆ ಸಾಮಾನ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವುದು. ರಾಜ್ಯಾದ್ಯಂತ ಇದೇ ನಿಯಮ ಅನುಸರಿಸುವುದು.
24) ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸಾ ಕಾರ್ಯದಲ್ಲಿ ಭಾಗಿಯಾಗಿರುವ ವೈದ್ಯಕೀಯ ವರ್ಗದವರಿಗೆ ಆಸ್ಪತ್ರೆಯ ಸಮೀಪವೇ ಹೋಟೆಲ್ ವ್ಯವಸ್ಥೆ ಮಾಡುವುದು. ಇದರಿಂದ ಅವರ ಮನೆಗೆ ಸೋಂಕು ಹರಡುವ ಸಾಧ್ಯತೆ ನೀಗಿಸಬಹುದು.
25) ಲಾಕ್ ಡೌನ್ ಮುಗಿಯುವಷ್ಟರಲ್ಲಿ ಎಲ್ಲಾ ಕೋವಿಡ್ ಆಸ್ಪತ್ರೆಗಳಿಗೂ ಅಗತ್ಯ ಪ್ರಮಾಣದ ಪಿಪಿಇ ಕಿಟ್ಗಳನ್ನು ಕೊಳ್ಳುವುದು. ಕರ್ನಾಟಕದಲ್ಲಿ ಹೇರಳವಾಗಿರುವ ಗಾರ್ಮೆಂಟ್ ಉದ್ಯಮಗಳ ಸಹಾಯದಿಂದ ಪಿಪಿಇ ಕಿಟ್ಗಳನ್ನು ಉತ್ಪಾದಿಸಲು ಸಾಧ್ಯ.
Comments are closed.