ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಸಂಜೆಯಿಂದ 34 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಇದು ಇಲ್ಲಿಯವರೆಗೆ ಒಂದೇ ದಿನದಲ್ಲಿ ವರದಿಯಾದ ಅತಿ ಹೆಚ್ಚಿನ ಪ್ರಕರಣವಾಗಿವೆ.
ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 313ಕ್ಕೇರಿಕೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. 82 ಜನರು ಗುಣಮುಖರಾಗಿದ್ದಾರೆ.
ಬೆಂಗಳೂರಿನ 66 ವರ್ಷದ ಪುರುಷ ರೋಗಿ ಇಂದು ಮೃತಪಟ್ಟಿದ್ದಾರೆ. ಇವರು ಏ.10ರಿಂದ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ 16 ವರ್ಷದ ಬಾಲಕಿ ಸೇರಿ 7, ವಿಜಯಪುರದ 6, ಮೈಸೂರಿನ 3, ಬಿಬಿಎಂಪಿ ವ್ಯಾಪ್ತಿಯ 4, ಬೆಳಗಾವಿಯ ಒಂದು, ಬೆಳಗಾವಿ ಬಾಗೇವಾಡಿಯ 1, ಬೆಳಗಾವಿ ಚಿಕ್ಕೋಡಿಯ 1, ಬೆಳಗಾವಿ ರಾಯಭಾಗದ 4, ರಾಯಭಾಗದಲ್ಲಿ ನೆಲೆಸಿರುವ ಗೋವಾ ನಿವಾಸಿ, ರಾಯಭಾಗದಲ್ಲಿ ನೆಲೆಸಿರುವ ವಿಜಯಪುರ ನಿವಾಸಿ, ರಾಯಭಾಗದಲ್ಲಿ ನೆಲೆಸಿರುವ ಮಹಾರಾಷ್ಟ್ರ ನಿವಾಸಿ, ಕಲಬುರಿಯ 1, ಮೈಸೂರಿನ 1, ಗದಗದ 1 ಪ್ರಕರಣಗಳು ವರದಿಯಾಗಿವೆ.
ಈ ಬಗ್ಗೆ ಸಚಿವ ಬಿ ಶ್ರೀರಾಮುಲು ಟ್ವೀಟ್ ಮಾಡಿದ್ದು, ‘ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 34 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 313ಕ್ಕೆ ಏರಿದೆ. ಇದುವರೆಗೆ 13 ಜನ ಮೃತಪಟ್ಟು, 82 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಮುಖವಾಗಿ ಕಲಬುರಗಿಯಲ್ಲಿ ಒಂದು ವರ್ಷದ ಮಗುವಿಗೆ ಕೊರೋನಾ ವೈರಸ್ ಕಂಡುಬಂದಿದ್ದು, ಮಗುವಿನ ಪೋಷಕರಿಗೆ ಟ್ರಾವಲ್ ಹಿಸ್ಟರಿಯೇ ಇಲ್ಲ. ಹೀಗಾಗಿ ಮಗುವೆಗೆ ಹೇಗೆ ಸೋಂಕು ತಗುಲಿತು ಎಂಬುದರ ಕುರಿತು ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕಚೇರಿ ಕೂಡ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಈವರೆಗೆ 313 #ಕೋವಿಡ್_19 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 13 ಮಂದಿ ಮೃತಪಟ್ಟಿದ್ದು, 82 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಉಳಿದವರ ಚಿಕಿತ್ಸೆ ಮುಂದುವರೆದಿದೆ. ಹೊಸ 34 ಪ್ರಕರಣಗಳ ವಿವರ, ತಜ್ಞ ವೈದ್ಯರಿಂದ ಟೆಲಿಮೆಡಿಸಿನ್, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರು ಆರೋಗ್ಯ ಸಹಾಯವಾಣಿ ಸಂಪರ್ಕಿಸಲು ಸೂಚನೆ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ಮಾಹಿತಿಗಳು ಇಂತಿವೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಸಹಾಯವಾಣಿ ನಂಬರ್ ಗಳನ್ನು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಸಾವು, ಸಿಲಿಕಾನ್ ಸಿಟಿಯಲ್ಲಿ ವೈರಸ್ ಗೆ ಒಟ್ಟಾರೆ 3 ಮಂದಿ ಬಲಿ
ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ರಾಮಸ್ವಾಮಿ ಪಾಳ್ಯದ ನಿವಾಸಿ 66 ವರ್ಷದ ವೈರಸ್ ಸೋಂಕಿತ ವ್ಯಕ್ತಿ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ ಮೃತ ವ್ಯಕ್ತಿ ಪೇಷೆಂಟ್ ನಂಬರ್ 195 ಎಂದು ತಿಳಿದುಬಂದಿದ್ದು, ಮಣಿಪುರದಿಂದ ಬೆಂಗಳೂರಿಗೆ ಮಾರ್ಚ್ 12 ರಂದು ಆಗಮಿಸಿದ್ದರು. ಬಿಬಿಎಂಪಿ ನಿವಾಸಿಯಾಗಿದ್ದ ಇವರು ಏ.10 ರಿಂದ ವೆಂಟಿಲೇಟರ್ ನಲ್ಲಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಈ ಹಿಂದೆ ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ್ದ ವೈದ್ಯರು ಕೊರೋನಾ ಐಸೋಲೇಷನ್ ಆಸ್ಪತ್ರೆಗೆ ಕಳುಹಿಸಿದ್ದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
Comments are closed.