ಕರ್ನಾಟಕ

ಮಣಿಪಾಲ್‌ನಲ್ಲಿ ಕೊರೊನಾ ಲ್ಯಾಬ್‌ ಆರಂಭಕ್ಕೆ ಚರ್ಚೆ: ಶೋಭಾ ಕರಂದ್ಲಾಜೆ

Pinterest LinkedIn Tumblr


ಉಡುಪಿ: ಮಣಿಪಾಲದ ಕಸ್ತೂರ್‌ ಬಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್‌ ಪರೀಕ್ಷಾ ಪ್ರಯೋಗಾಲಯ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಉಡುಪಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕೊರೊನಾ ನಿಯಂತ್ರಣ ಕುರಿತು ತೆಗೆದುಕೊಂಡ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಕೋವಿಡ್‌-19 ಪರೀಕ್ಷಾ ಲ್ಯಾಬ್‌ ಆರಂಭಿಸುವುದರಿಂದ ತ್ವರಿತವಾಗಿ ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ. ಅದಲ್ಲದೇ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌-19 ತಪಾಸಣೆ ನಡೆಸಲು ಅನುಕೂಲವಾಗಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಅನುಮತಿಗೆ ಯತ್ನಿಸುವೆ ಎಂದ ಅವರು, ಜಿಲ್ಲೆಯಲ್ಲಿ ಕೈಗೊಂಡ ಪರಿಹಾರ ಕಾರ್ಯದಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಲು ಸೂಚಿಸಿದರು.

ಮಣಿಪಾಲದ ಕೆಎಂಸಿಗೆ ತುರ್ತು ಚಿಕಿತ್ಸೆಗೆ ಆಗಮಿಸುವ ಹೊರ ಜಿಲ್ಲೆಗಳ ರೋಗಿಗಳಿಗೆ ಜಿಲ್ಲೆಯೊಳಗೆ ಪ್ರವೇಶಿಸಲು ಅನುಮತಿ ನೀಡುವಂತೆ ಹಾಗೂ ರೋಗಿಗಳ ಜತೆ ಕೇವಲ ಒಬ್ಬರು ಅಥವಾ ಅನಿವಾರ್ಯವಿದ್ದಲ್ಲಿ ಗರಿಷ್ಠ ಇಬ್ಬರು ಸಹಾಯಕರು ಮಾತ್ರ ಬರುವ ಕುರಿತು ಕಟ್ಟುನಿಟ್ಟು ಮಾಡಲು ಸೂಚಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗದಂತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಸಾರ್ವಜನಿಕರನ್ನು ಜಿಲ್ಲಾಡಳಿದ ಮೂಲಕ ಗುರುತಿಸಿ, ಮೊದಲ ಹಂತದಲ್ಲಿ 5,388 ಆಹಾರದ ಕಿಟ್‌ ವಿತರಿಸಲಾಗಿದೆ. 658 ನಿರಾಶ್ರಿತರಿಗೆ ಶೆಲ್ಟರ್‌ ರೂಂಗಳಲ್ಲಿ ಅಗತ್ಯ ವ್ಯವಸ್ಥೆ ಒದಗಿಸಿದ್ದು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. 2ನೇ ಹಂತದಲ್ಲಿ 5 ಸಾವಿರ ಮಂದಿಗೆ ಜಿಲ್ಲೆಯ ವಿವಿಧ ದೇವಳಗಳ ಮೂಲಕ ಆಹಾರದ ಕಿಟ್‌ ವಿತರಿಸಲು ಸಂಬಂಧಪಟ್ಟ ತಹಸೀಲ್ದಾರ್‌ಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಔಷಧ ದಾಸ್ತಾನಿದ್ದು, ಕೊರತೆ ಇಲ್ಲ. ಇನ್ಫೋಸಿಸ್‌, ಡಾ. ಜಿ. ಶಂಕರ್‌ ಸೇರಿ ವಿವಿಧ ದಾನಿಗಳ ನೆರವಿನಿಂದ ವೈದ್ಯಕೀಯ ಸಲಕರಣೆಗಳ ನೆರವು ದೊರೆತಿದೆ. ಪಾರ್ಲೇಜಿ ಅವರಿಂದ 4 ಲಕ್ಷ ಬಿಸ್ಕೆಟ್‌ ಪ್ಯಾಕ್‌ ಪೂರೈಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ಅಗತ್ಯ ಸಾಮಗ್ರಿ ಖರೀದಿಗೆ ಬೆಳಗ್ಗೆ 7ರಿಂದ 11ರ ತನಕ ಸಮಯ ನಿಗದಿ ಮಾಡಿದ್ದು, ಈ ಅವಧಿಯಲ್ಲಿ ಹೂ ಮಾರಬಹುದು. ಮರಣ ಸಂದರ್ಭ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 19 ದಿನಗಳಿಂದ ಕೊರೊನಾ ಪಾಸಿಟಿವ್‌ ಕಂಡು ಬಂದಿಲ್ಲ. 28 ದಿನಗಳಾದಲ್ಲಿ ಜಿಲ್ಲೆ ಗ್ರೀನ್‌ ಝೋನ್‌ ವ್ಯಾಪ್ತಿಗೆ ಬರಲಿದೆ. ಜಿಲ್ಲೆಯೊಳಗೆ ಕೊರೊನಾ ವೈರಸ್‌ ಕಂಡು ಬರುವ ಸಾಧ್ಯತೆ ಕಡಿಮೆ ಇದ್ದು, ಹೊರಗಿನಿಂದ ಮಾತ್ರ ಬರುವ ಸಾಧ್ಯತೆಗಳಿವೆ. ಹೀಗಾಗಿ ಜಿಲ್ಲೆಯ ಗಡಿಗಳನ್ನು ಬಿಗಿಗೊಳಿಸಲಾಗಿದೆ. ಜಿಲ್ಲೆಯೊಳಗೆ ಪ್ರವೇಶಿಸಲು ಯತ್ನಿಸುತ್ತಿರುವವರ ಯಾವುದೇ ಒತ್ತಡಗಳಿಗೆ, ಜಿಲ್ಲೆಯ ನಾಗರಿಕರ ಆರೋಗ್ಯ ದೃಷ್ಟಿಯಿಂದ ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಮಳೆಗಾಲದ ಕಾರಣದಿಂದ ತುರ್ತಾಗಿ ನಡೆಯಬೇಕಿದ್ದ ಸೇತುವೆ ನಿರ್ಮಾಣ ಕಾಮಗಾರಿಗಳ ಆರಂಭಕ್ಕೆ ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ರಸ್ತೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು. ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್‌, ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಉಪಸ್ಥಿತರಿದ್ದರು.

409ರಲ್ಲಿ 394 ವರದಿ ನೆಗೆಟಿವ್‌
ಉಡುಪಿ ಜಿಲ್ಲೆಯಿಂದ ಕೋವಿಡ್‌-19 ಶಂಕಿತ 409 ಮಂದಿಯ ಗಂಟಲು ಸ್ರಾವ, ರಕ್ತ ಮಾದರಿಯನ್ನು ಹಾಸನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಶುಕ್ರವಾರ ಬಂದ 394 ವರದಿಗಳೂ ನೆಗೆಟಿವ್‌ ಆಗಿವೆ. 15 ವರದಿ ಬರುವುದು ಬಾಕಿಯಿದೆ ಎಂದು ಕೋವಿಡ್‌-19 ನೋಡೆಲ್‌ ಅಧಿಕಾರಿ ಡಾ. ಪ್ರಶಾಂತ್‌ ಭಟ್‌ ತಿಳಿಸಿದರು. ಡಾ. ಟಿಎಂಎ ಪೈ ಕೋವಿಡ್‌-19 ಆಸ್ಪತ್ರೆಯಿಂದ ಇಬ್ಬರು ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ಒಬ್ಬ ಮಾತ್ರ ಕೊರೊನಾ ಸೋಂಕಿತರ ಮೊದಲ ಮಾದರಿ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಎರಡನೇ ವರದಿಗೆ ಕಾಯಲಾಗುತ್ತಿದೆ. ಭಟ್ಕಳದ ಗರ್ಭಿಣಿ ಮಹಿಳೆಯ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ತಿಳಿಸಿದರು.

Comments are closed.