ಬೆಂಗಳೂರು: ಮಾಧ್ಯಮದವರು ಪ್ರಾಣ ಬದಿಗಿಟ್ಟು ಕೆಲಸ ಮಾಡುತ್ತಿದ್ದೀರಿ, ಯಾವುದನ್ನೂ ಲೆಕ್ಕಿಸದೇ ಸೇವೆ ಮಾಡುತ್ತಿದ್ದೀರಿ, ನಿಮ್ಮನ್ನ ಕೂಡ ಭಗವಂತ ಕಾಪಾಡಲಿ ಅಂತ ಪ್ರಾರ್ಥನೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದರು.
ನಗರದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಇವತ್ತು ಅತ್ಯಂತ ದುಃಖದಿಂದ ಮಾತಾಡುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಮಾತಾಡುತ್ತಿಲ್ಲ, ಸಾಮಾನ್ಯನಾಗಿ ಮಾತನಾಡುತ್ತಿದ್ದೇನೆ ಎಂದರು.
ಇನ್ನು ಒಂದು ತಿಂಗಳಿನಿಂದ ರಾಜ್ಯ ಲಾಕ್ಡೌನ್ ಆಗಿದೆ. ಇವತ್ತಿನವರೆಗೂ ನಾನು ಮಾತನಾಡಬಾರದು ಎಂದುಕೊಂಡಿದ್ದೆ. ಸರ್ಕಾರ ಕಣ್ಣು ತೆರಯುತ್ತದೆ, ಜನರನ್ನು ಕಾಪಾಡುತ್ತೆ ಅಂತ ನೋಡುತ್ತಿದ್ದೇವೆ. ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನು ನಾವು ಒಪ್ಪಿಕೊಂಡಿದ್ದೇವೆ. ಸರ್ಕಾರದ ತೀರ್ಮಾನಕ್ಕೆ ಬೇಷರತ್ ಬೆಂಬಲ ನೀಡಿದ್ದೆವು. ಜೀವ ಇದ್ದರೆ ಮಾತ್ರ ವ್ಯವಹಾರ, ರಾಜಕೀಯ. ಯಾವುದೇ ಜಾತಿ ಧರ್ಮಕ್ಕೆ ಬಂದಿರುವ ಕಾಯಿಲೆ ಅಲ್ಲ ಎಂದು ಅವರು ತಿಳಿಸಿದರು.
ಸದ್ಯ ಪ್ರಧಾನಮಂತ್ರಿ ಮಾತುಗಳನ್ನು ನಾನು ಗಮನಿಸಿದ್ದೇನೆ. ಅಸಂಘಟಿತ ವಲಯದ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ, ರೈತರು, ಹಮಾಲಿಗಳು, ದರ್ಜಿಗೞು, ಬಡಿಗೇರ, ಕಮ್ಮಾರ, ಕುಂಬಾರ, ಮೀನುಗಾರ, ಸವಿತಾ ಸಮಾಜ ಸೇರಿ ಅನೇಕ ಕಾರ್ಮಿಕ ವಲಯ ಇದೆ. ಇಂತಹ ಸಣ್ಣ ಸಣ್ಣ ಕಾರ್ಮಿಕರ ಬಗ್ಗೆ ಯಾರೂ ಮಾತನಾಡಿಲ್ಲ, ರಾಜ್ಯದ ಅನೇಕ ಮಂತ್ರಿಗಳು ಮಾತನಾಡಿದ್ದ ಬಗ್ಗೆ ನೋಡಿಲ್ಲ, ನರೇಗಾ ಯೋಜನೆಯಡಿ 10 ಸಾವಿರ ಕೋಟಿ ಇದೆ ಅದನ್ನು ನರೇಗಾ ಕೂಲಿ ಕಾರ್ಮಿಕರಿಗೆ ತಲುಪಿಸಿ ಎಂದು ಡಿ.ಕೆ.ಶಿವಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಷ್ಟೆ ಅಲ್ಲದೆ, ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂ. ಕೊಡಬೇಕು. ಪ್ರತಿ ಕಾರ್ಮಿಕನಿಗೂ ಪರಿಹಾರ ನೀಡಬೇಕು. ತರಕಾರಿ, ಹೂವು, ಹಣ್ಣು ನಾಶವಾಗ್ತಿದೆ. ಈವರೆಗೂ ಅಧಿಕಾರಿಗಳು ಸರ್ವೆ ಮಾಡುತ್ತಿಲ್ಲ, ತೋಟಗಾರಿಕೆ ಸಚಿವ ಹಾಗೂ ಸಿಎಂ ಕ್ಷೇತ್ರದಲ್ಲಿ ನಾವು ಸರ್ವೆ ಮಾಡಿದ್ದೇವೆ. ನಮ್ಮ ಶಾಸಕರು ಖುದ್ದು ಹೋಗಿ ಸರ್ವೆ ಮಾಡಲು ಕರೆ ನೀಡಿದ್ದರು. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಬಿ.ಸಿ.ಪಾಟೀಲ್ ಹೇಳ್ತಾರೆ. ಅಣ್ಣಾ, ಬಿ.ಸಿ. ಪಾಟೀಲಣ್ಣ ನಿನ್ನ ನಂಬರ್ ಕೊಡಣ್ಣ. ಯಾರು ಯಾರಿಗೆ ಗಮನಕ್ಕೆ ತರಬೇಕು(?) ಎಂದು ಡಿ.ಕೆ.ಶಿವಕುಮಾರ್ ಅವರು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಕಾರ್ಯವೈಖರಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
Comments are closed.