![](https://www.kannadigaworld.com/wp-content/uploads/2020/03/school-600x343.gif)
ಬೆಂಗಳೂರು: ‘ಆನ್ಲೈನ್ ತರಗತಿ ನಡೆಸಲು ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಪಡೆಯುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಇಲಾಖೆಯ ಅಯುಕ್ತ ಡಾ.ಕೆ.ಜಿ.ಜಗದೀಶ್, “ಆನ್ಲೈನ್ ಮೂಲಕ ಬೋಧನೆ ಆರಂಭಿಸಿರುವ ಶಾಲಾ ಆಡಳಿತ ಮಂಡಳಿ ಶುಲ್ಕ ಪಾವತಿಗೆ ದೂರವಾಣಿ, ಇ-ಮೇಲ್ ಹಾಗೂ ಎಸ್ಸೆಮ್ಮೆಸ್ ಮೂಲಕ ಸೂಚಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಸಂಬಂಧ ಏ. 17ರಂದು ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಾಸಗಿ ಶಾಲೆಗಳು ಆನ್ಲೈನ್ ಮೂಲಕ ಪಾಠ, ಪ್ರವಚನ ನಡೆಸಲು ಯಾವುದೇ ಅಭ್ಯಂತವಿಲ್ಲ. ಆದರೆ, ಶುಲ್ಕ ಪಡೆಯುವಂತಿಲ್ಲಎಂದು ನಿರ್ಧರಿಸಲಾಗಿದೆ,” ಎಂದು ತಿಳಿಸಿದ್ದಾರೆ.
‘‘2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ತೇರ್ಗಡೆಗೊಂಡು ಅದೇ ಶಾಲೆಯಲ್ಲಿ ಮುಂದಿನ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಪಡೆಯುವುದು ಹಾಗೂ 2020-21ನೇ ಸಾಲಿನ ದಾಖಲಾತಿ ಪ್ರಕ್ರಿಯೆಯನ್ನು ಮುಂದೂಡುವಂತೆ ಈಗಾಗಲೇ ಇಲಾಖೆ ವತಿಯಿಂದ ಆದೇಶಿಸಲಾಗಿದೆ. ಯಾವುದೇ ಶುಲ್ಕವನ್ನು ಸರಕಾರದ ಮುಂದಿನ ಆದೇಶದವರೆಗೆ ಪಡೆಯುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಸಾಂಕ್ರಾಮಿಕ ರೋಗಗಳ ಅಧಿನಿಯಮ 1897ರ ಸೆಕ್ಷನ್ 3ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ,” ಎಂದು ತಿಳಿಸಿದ್ದಾರೆ.
Comments are closed.