ಬೆಂಗಳೂರು (ಏಪ್ರಿಲ್ 20); ಕೊರೋನಾ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದ ರಾಷ್ಟ್ರದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಅದರಂತೆ ರಾಜ್ಯದಲ್ಲೂ ಲಾಕ್‌ಡೌನ್ ಜಾರಿಯಲ್ಲಿದೆ. ಈ ಅವಧಿಯಲ್ಲಿ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಅಹಿತಕರ ಘಟನೆ ಹೊರತಾಗಿ ಬೇರೆಲ್ಲೂ ರಾಜ್ಯದ ಕಾನೂನು ಸುವ್ಯವಸ್ಥೆಯೇ ಕುಸಿದು ಹೋಗುವಂತಹ ಘಟನೆ ನಡೆದಿಲ್ಲ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನ ಪಾದರಾಯನಪುರ ನಿನ್ನೆ ರಾತ್ರಿ ಅಂತಹದ್ದೊಂದು ಘಟನೆಗೆ ಸಾಕ್ಷಿಯಾಗಿದೆ.
ಪಾದರಾಯನಪುರ ನಿನ್ನೆ ರಾತ್ರಿ ಅಕ್ಷರಶಃ ಯುದ್ಧಭೂಮಿಯಂತಾಗಿತ್ತು. ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಅಲ್ಲಿನ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಮುಗಿಬಿದ್ದಿದ್ದರು. ಪರಿಣಾಮ ದೊಡ್ಡ ಮಟ್ಟದ ಗಲಾಟೆಯೊಂದು ನಡೆದಿದ್ದು, ಈ ಕುರಿತ ವಿಡಿಯೋ ಸಹ ವೈರಲ್ ಆಗಿದೆ. ಅಲ್ಲದೆ, ಈ ಘಟನೆ ರಾಜ್ಯದ ಕಾನೂನು ಸುವ್ಯವಸ್ಥೆಯ ಎದುರು ದೊಡ್ಡದೊಂದು ಪ್ರಶ್ನೆಯನ್ನೂ ಇಟ್ಟಿದೆ.
ಏನಿದು ಘಟನೆ?
ಈಗಾಗಲೇ ಪಾದರಾಯನಪುರವನ್ನು ಕೊರೋನಾ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಅತಿಹೆಚ್ಚು ಜನರಲ್ಲಿ ಕೊರೋನಾ ಸೋಂಕು ಕಂಡುಬಂದಿರುವುದು ಆರೋಗ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಸೋಂಕಿತರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ.
ಆದರೆ, ಇದರ ಜೊತೆಗೆ ಕೊರೋನಾ ಸೋಂಕಿತರ ಜೊತೆ ಸಂಪರ್ಕ ಹೊಂದಿದ್ದವರನ್ನು ಸಹ ಕ್ವಾರಂಟೈನ್‌ನಲ್ಲಿ ಇಡಲು ನಿನ್ನೆ ರಾತ್ರಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಮುಂದಾಗಿದ್ದಾರೆ. ಈ ವೇಳೆ ಕ್ವಾರಂಟೈನ್‌ಗೆ ಒಪ್ಪದ ಕೊರೋನಾ ಶಂಕಿತರು ಹಾಗೂ ಸ್ಥಳೀಯರು ಒಟ್ಟಾಗಿ ಪೊಲೀಸರ ಮತ್ತು ಆರೋಗ್ಯ ಸಿಬ್ಬಂದಿಗಳ ವಿರುದ್ಧವೇ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಗಲಾಟೆಗೆ ಕಾರಣ ಓರ್ವ ಮಹಿಳೆ ಎನ್ನಲಾಗುತ್ತಿದೆ.
ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು:
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 57 ಜನರನ್ನು ಬಂಧಿಸಿ ನಿನ್ನೆ ರಾತ್ರಿ ಇಡೀ ಲಾಠಿ ರುಚಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಘಟನೆ ಸಂಬಂಧಪಟ್ಟಂತೆ ಗಲಾಟೆಗೆ ಕುಮ್ಮಕ್ಕು ನೀಡಿದ ಮಹಿಳೆಯನ್ನೂ ಪೊಲೀಸರು ಬಂದಿಸಿದ್ದಾರೆ. ಈ ಎಲ್ಲರಿಗೂ ಇಂದು ಕೊರೋನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಸಿಎಂ ತುರ್ತು ಸಭೆ, ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ಬೊಮ್ಮಾಯಿ:
ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು ಈ ಕುರಿತು ಚರ್ಚೆ ನಡೆಸಲು ಸಿಎಂ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಹ ಭಾಗಿಯಾಗಿದ್ದಾರೆ. ಅಲ್ಲದೆ, ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಗೃಹಸಚಿವ ಬಸವರಾಜ ಬೊಮ್ಮಾಯಿ ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಮಾತನಾಡಿರುವ ಅವರು, “ಇದು ಸಣ್ಣ ಘಟನೆಯಲ್ಲ, ಗಂಭೀರ ಘಟನೆ. ದುಷ್ಕರ್ಮಿಗಳ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳುತ್ತೇವೆ. ಬಂಧಿತರ ವಿರುದ್ಧ ಐದು ಪ್ರಕರಣಗಳು ದಾಖಲು. ಗಲಭೆ ಹಿಂದಿನ ಕೈಗಳ ಹುಡುಕಾಟ ನಡೆಸಲಾಗುತ್ತಿದೆ. ಈ ಘಟನೆ ಹಿಂದೆ ಎಷ್ಟೇ ದೊಡ್ಡವರಿದ್ದರೂ ಅವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಬಾಪೂಜಿನಗರ, ಪಾದರಾಯನಪುರ, ಟಿಪ್ಪು ನಗರಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಿಸಿ ವಿಶೇಷ ಬಂದೋಬಸ್ತ್ ನೀಡಲಾಗುವುದು ಎಂದಿದ್ದಾರೆ.
Comments are closed.