ಕರ್ನಾಟಕ

ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತದೆ: ಸುರೇಶ್ ಕುಮಾರ್

Pinterest LinkedIn Tumblr


ತುಮಕೂರು: ಲಾಕ್‌ಡೌನ್‌ ಮುಗಿಯುವ ಮೇ 3ರ ನಂತರ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ ಪರೀಕ್ಷೆ ಬರೆಯಲು ನಿರಂತರ ಅಧ್ಯಯನಶೀಲರಾಗಿರಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಅವರು ಇಂದು ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ದರ್ಶನ ಮಾಡಿ ವಸತಿ ಶಾಲೆಯಲ್ಲಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಶ್ರೀ ಮಠದಲ್ಲಿ 1320 ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇರುವುದನ್ನು ಖಚಿತಪಡಿಸಿಕೊಂಡು ಈ ವಿದ್ಯಾರ್ಥಿಗಳಲ್ಲಿರುವ ಸಂಶಯ ಮತ್ತು ಸಂದೇಹಗಳಿಗೆ ಪರಿಹಾರ ಸೂಚಿಸುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಉತ್ಸಾಹದಿಂದ ಓದಿನಲ್ಲಿ ಪ್ರವೃತ್ತರಾಗುವಂತೆ ಮನವೊಲಿಸುವ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದೇನೆಂದು ಅವರು ತಿಳಿಸಿದರು.

ವಿಶ್ವಕ್ಕೆ ಅಂಟಿಕೊಂಡಿರುವ ಪ್ರಾಣಾಂತಿಕ ಕೋವಿಡ್-19 ಸೋಂಕಿನಿಂದ ಮುಕ್ತರಾಗಲು ದೇಶ ಮತ್ತು ರಾಜ್ಯದಲ್ಲಿ ಲಾಕ್‌ ಡೌನ್ ಜಾರಿಗೊಳಿಸಲಾಗಿದ್ದು, ಮಾರ್ಚ್ 27 ರಿಂದ ಪ್ರಾರಂಭವಾಗಿ ಏಪ್ರಿಲ್ 9ಕ್ಕೆ ಮುಗಿಯಬೇಕಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಾಗೂ ಪಿ.ಯು.ಸಿ.ಯ ಒಂದು ವಿಷಯದ ಪರೀಕ್ಷೆಯು ಈ ವೇಳೆಗಾಗಲೆ ಮುಗಿದು ವಿದ್ಯಾರ್ಥಿಗಳು ರಜೆಯಲ್ಲಿ ಇರುತ್ತಿದ್ದರು. ಆದರೆ ದೇಶದಲ್ಲಿ ಕೊರೋನಾ ವೈರಸ್ ಹರಡದಂತೆ ಲಾಕ್‌ ಡೌನ್ ಜಾರಿಯಿಂದ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ಪರೀಕ್ಷೆ ಮುಂದೂಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ 8.50 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವವರಿದ್ದು, ಅವರೊಂದಿಗೆ ಪೋನ್ಇನ್ ಕಾರ್ಯಕ್ರಮದ ಮೂಲಕ ನೇರವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಪರೀಕ್ಷೆ ನಡೆಯುವವರೆಗೆ ಸಂಯಮ ಕಾಪಾಡಿಕೊಳ್ಳಲು ಧೈರ್ಯ ಹೇಳಲಾಗುತ್ತಿದೆ. ತಡವಾದರೂ ವಿದ್ಯಾರ್ಥಿಗಳಿಗೆ ಕಾಲಾವಕಾಶ ನೀಡಿ ಹಾಗೂ ಪರೀಕ್ಷೆಯ ಮುನ್ನ ಪುನರ್ಮನನ ತರಗತಿಗಳನ್ನು ನಡೆಸಿ ಪರೀಕ್ಷೆ ನಡೆಸುವ ದಿನವನ್ನು ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ಪ್ರಕಟಿಸಲಿದೆ ಎಂದು ಅವರು ತಿಳಿಸಿದರು.

ದೂರದರ್ಶನ ಚಂದನವಾಹಿನಿಯಲ್ಲಿ 2-3 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಕುರಿತು ವಿಷಯಾಧಾರಿತ ಸರಣಿ ಮಾಲೆಯಲ್ಲಿ ಪ್ರಸಾರಪಡಿಸಲಾಗುವುದು. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಅವುಗಳಿಗೆ ಉತ್ತರಿಸುವ ಅಭ್ಯಾಸ ಮಾಡುತ್ತಿರಬೇಕೆಂದು ಅವರು ಸಲಹೆ ಮಾಡಿದರು. ಸರ್ಕಾರ ನಿರ್ಧಾರ ಪ್ರಕಟಿಸುವ ಮೊದಲು ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳುವುದು ಅಥವಾ ಶುಲ್ಕ ಪಡೆಯುವುದು ಸಮಂಜಸವಲ್ಲವೆಂದು ಅವರು ತಿಳಿಸಿದರು.

ಪ್ರಸಕ್ತ ಸಮಯದಲ್ಲಿ ಸಮಾಜದ ಎಲ್ಲಾ ತರಹದ ಜನರ ಆರ್ಥಿಕ ಸ್ಥಿತಿ ಜರ್ಜರಿತವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಶಾಲಾ ಶುಲ್ಕ ವಿಧಿಸುವ ಬಗ್ಗೆ ಸರ್ಕಾರ ಚರ್ಚಿಸಿ ತೀರ್ಮಾನ ಕೈಗೊಂಡು ಪ್ರಕಟಿಸಲಿದೆ ಎಂದು ಸಚಿವರು ಹೇಳಿದರು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ನಮ್ಮ ವೇಳೆಯಲ್ಲಿಯೇ ಕೊರೋನಾ ಬಂದಿದೆ ಎಂದು ಬೇಜಾರು ಮಾಡಿಕೊಳ್ಳದೆ ಸಂಯಮದಿಂದ ಇದ್ದು, ಜೀವನ ಪರೀಕ್ಷೆಯಾಗಿರುವ ಕೊರೋನಾ ಮಾರಿಯನ್ನು ಸಮರೋಪಾದಿಯಲ್ಲಿ ಗೆದ್ದು, ನಂತರ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಅಣಿಯಾಗಬೇಕೆಂದು ಅವರು ಸಲಹೆ ಮಾಡಿದರು

ಕೊರೋನಾದಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮುಂದೂಡಿಕೆಯಾಗಿರುವುದರಿಂದ ಪರೀಕ್ಷೆ ಬರೆಯಲು ಆತಂಕದಿಂದ ಕಾಯುತ್ತಿರುವ ಮಕ್ಕಳಿಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಏ. 29ರಿಂದ ಪುನರ್ಮನನ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ತಿಳಿಸಿದ್ದಾರೆ.

Comments are closed.