ಕರ್ನಾಟಕ

ರಾಜ್ಯದಲ್ಲಿ 11 ಹೊಸ ಕೊರೊನಾ ಪಾಸಿಟಿವ್‌ ಪ್ರಕರಣ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಹೊಸ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಮಂಗಳವಾರ ಒಟ್ಟು 11 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 523ಕ್ಕೆ ಏರಿಕೆಯಾಗಿದೆ.

ಭಾನುವಾರ 3, ಸೋಮವಾರ 8 ಮತ್ತು ಮಂಗಳವಾರ 11 ಪ್ರಕರಣಗಳು ಖಚಿತವಾಗಿದ್ದು. ಮೂರು ದಿನಗಳಲ್ಲಿ ಕೇವಲ 22 ಪ್ರಕರಣಗಳಷ್ಟೆ ವರದಿಯಾಗಿವೆ. ಜೊತೆಗೆ ರೋಗದಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಏರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇದೇ ಅವಧಿಯಲ್ಲಿ ಕಲಬುರಗಿಯ ಓರ್ವ ಸೋಂಕಿತರು ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ ಇವರು ಅಸುನೀಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್‌-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿದೆ. ಇನ್ನು ಓರ್ವ ರೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಲಬುರಗಿಯಲ್ಲಿ 6, ಬಾಗಲಕೋಟೆಯಲ್ಲಿ 3 ಸೋಂಕಿತರು

ಹೊಸದಾಗಿ ಪತ್ತೆಯಾಗಿರುವ 11 ಪ್ರಕರಣಗಳಲ್ಲಿ ಆರು ಪ್ರಕರಣಗಳು ಕಲಬುರಗಿಯಿಂದ ವರದಿಯಾಗಿವೆ. ಆರೂ ಜನ 425ನೇ ರೋಗಿಯ ಸಂಪರ್ಕಿತರಾಗಿದ್ದಾರೆ. ಇವರಲ್ಲಿ ನಾಲ್ವರು ಮಹಿಳೆಯರಾಗಿದ್ದಾರೆ.

ಇನ್ನು ಮೂವರು ಬಾಗಲಕೋಟೆಯ ಜಮಖಂಡಿಯವರಾಗಿದ್ದಾರೆ. ಇವರಲ್ಲಿ ಓರ್ವ 11 ವರ್ಷದ ಬಾಲಕ ಕೂಡ ಸೇರಿದ್ದಾನೆ. ಇನ್ನಿಬ್ಬರಲ್ಲಿ ಒಬ್ಬರು ಗದಗ ಜಿಲ್ಲೆಯ 75 ವರ್ಷದ ವೃದ್ಧರಾಗಿದ್ದಾರೆ. ಇವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನೊಬ್ಬರು ಬೆಂಗಳೂರು ನಗರದವರಾಗಿದ್ದು, ಪಾದರಾಯನಪುರ ವಾರ್ಡ್‌ಗೆ ಭೇಟಿ ನೀಡಿದ ಇತಿಹಾಸ ಇವರಿಗಿದೆ.

14 ಜನರು ಗುಣಮುಖ

11 ಜನರಿಗೆ ಕೊರೊನಾ ವೈರಸ್‌ ಕಾಣಿಸಿಕೊಂಡಿರುವ ಹೊತ್ತಲ್ಲೇ 14 ರೋಗಿಗಳು ಕೋವಿಡ್‌-19ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಇಲ್ಲಿಯವರೆಗೆ 207 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

ಸದ್ಯ ರಾಜ್ಯದಲ್ಲಿ 295 ಸಕ್ರಿಯ ಕೊರೊನಾ ವೈರಸ್‌ ಪ್ರಕರಣಗಳಿದ್ದು, ಇದರಲ್ಲಿ 288 ಜನರ ಆರೋಗ್ಯ ಸ್ಥಿರವಾಗಿದೆ. ಇವರೆಲ್ಲರೂ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 7 ರೋಗಿಗಳಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Comments are closed.