ಬೆಂಗಳೂರು: ಮೇ.3 ರ ಬಳಿಕ ಜಿಲ್ಲಾ ಮಟ್ಟದ ಬದಲು ತಾಲ್ಲೂಕು ಮಟ್ಟ ಹಾಗೂ ವಾರ್ಡ್ ಹಂತದಲ್ಲಿ ಲಾಕ್‌ಡೌನ್ ಸಡಲಿಕೆ ಮಾಡಲು ಚಿಂತನೆ ನಡೆಸಲಾಗುವುದು ಹಾಗೂ ಕೂಲಿ ಕಾರ್ಮಿಕರಿಗೆ ದುಡಿಯಲು ಅವಕಾಶ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದಾಗಿ ಲಾಕ್‌ಡೌನ್ ಆಗಿರುವ ಜಯನಗರ ವಿಧಾನಸಭಾ ಕ್ಷೇತ್ರದ ಸಾರಕ್ಕಿ ಮತ್ತು ಜೆ.ಪಿ. ನಗರ ವಾರ್ಡ್‌ಗಳಲ್ಲಿ ತೀರಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾಜಿ ಮಹಾಪೌರ ಎಸ್.ಕೆ. ನಟರಾಜ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಳ್ಳುಗಾಡಿಗಳ ಮೂಲಕ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
“ಜಿಲ್ಲಾ ಮಟ್ಟದಲ್ಲಿ ಲಾಕ್‌ಡೌನ್ ಮಾಡಿದರೆ ಇಡೀ ಜಿಲ್ಲೆಯಲ್ಲಿ ಚಟುವಟಿಕೆ ಸ್ಥಗಿತಗೊಳ್ಳಲಿದೆ. ಬದಲಿಗೆ ತಾಲ್ಲೂಕು ಮಟ್ಟದಲ್ಲಿ ಲಾಕ್‌ಡೌನ್ ಮಾಡುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ,” ಎಂದರು.
“ಬೆಂಗಳೂರು ನಗರದಲ್ಲಿ 198 ವಾರ್ಡ್‌ಗಳಿದ್ದು, ಕೆಲವು ವಾರ್ಡ್‌ಗಳಲ್ಲಿ ಕೊರೊನಾ ವೈರಸ್ ಸಮಸ್ಯೆ ಕಂಡು ಬಂದಿದೆ. ಹಾಗೆಂದು ಇಡೀ ಜಿಲ್ಲೆಯನ್ನು ಲಾಕ್‌ಡೌನ್ ಮಾಡಿದರೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು ತೀವ್ರ ಸಮಸ್ಯೆ ಎದುರಾಗಲಿದೆ. ಹೀಗಾಗಿ, ನಗರ ಪ್ರದೇಶಗಳಲ್ಲಿ ವಾರ್ಡ್‌ಗಳ ಮಟ್ಟದಲ್ಲಿ ಮಾತ್ರ ಲಾಕ್‌ಡೌನ್ ಮಾಡಲು ಉದ್ದೇಶಿಸಲಾಗಿದೆ,” ಎಂದು ಹೇಳಿದರು.
“ಮೇ.3 ರ ಬಳಿಕ ಲಾಕ್‌ಡೌನ್ ಸಡಿಲಿಸಲಾಗುತ್ತಿದ್ದು, ಕೂಲಿ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ದೊರೆಯಲಿದೆ. ಎಲ್ಲರ ಸಹಕಾರದಿಂದ ಕೊರೊನಾ ವೈರಸ್ ಮುಕ್ತ ಭಾರತ ನಿರ್ಮಾಣ ಮಾಡಬಹುದು. ಕೊರೊನಾ ವೈರಸ್ ಇಡಿ ವಿಶ್ವಕ್ಕೆ ಮಹಾಮಾರಿಯಾಗಿ ವಕ್ಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ದಿಟ್ಟ ನಿರ್ಧಾರದಿಂದ ರಾಜ್ಯ ಮತ್ತು ದೇಶದಲ್ಲಿ ಸೋಂಕು ನಿಯಂತ್ರಣದಲ್ಲಿದೆ,” ಎಂದು ಅವರು ತಿಳಿಸಿದರು.
ಮಾಜಿ ಮೇಯರ್ ಎಸ್.ಕೆ. ನಟರಾಜ್ ಮಾತನಾಡಿ, ಕೊರೋನ ವೈರಸ್ ನಿಂದ ಸಂಕಷ್ಟದಲ್ಲಿದ್ದು, ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಬಡವರು, ಮಹಿಳೆಯರು, ವಯೊವೃದ್ದರು, ಆಟೋ ಚಾಲಕರನ್ನು ಗುರುತಿಸಿ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಸಿವಿನಿಂದ ಯಾರೂ ಬಳಲಬಾರದು ಎಂಬ ಕಾರಣದಿಂದ 5000 ಸಾವಿರ ಕುಟುಂಬಗಳಿಗೆ ಅಕ್ಕಿ, ಬೇಳೆ ಮತ್ತು ಅಡುಗೆ ಎಣ್ಣಿ ಗೋಧಿ ಇನ್ನಿತರೆ ಆಹಾರ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ. ಇನ್ನೂ ಮೂರು ಸಾವಿರ ಕಿಟ್ ಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.
Comments are closed.