ಕರ್ನಾಟಕ

ಕೊರೊನಾ ಸೋಂಕಿತನ ಟ್ರಾವಲ್‌ ಹಿಸ್ಟರಿ ಪತ್ತೆ ಹಚ್ಚುವ ಆ್ಯಪ್ ಕಂಡುಹಿಡಿದ ಧಾರವಾಡದ 10ನೇ ತರಗತಿ ವಿದ್ಯಾರ್ಥಿ

Pinterest LinkedIn Tumblr


ಧಾರವಾಡ: ಕೊರೊನಾ ಪಾಸಿಟಿವ್ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪತ್ತೆಗೆ ಧಾರವಾಡದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಒಂದು ಆ್ಯಪ್ ಆವಿಷ್ಕರಿಸಿದ್ದಾನೆ. ಇದನ್ನು ಪ್ರಧಾನಮಂತ್ರಿ ಸಚಿವಾಲಯ ಕಚೇರಿ ಅಧಿಕಾರಿಗಳು ಅತ್ಯುತ್ತಮ ಸಲಹೆ ಎಂದು ಒಪ್ಪಿಕೊಂಡಿದ್ದಾರೆ ಕೂಡ.

ನಗರದ ಜೆಎಸ್‌ಎಸ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ಮನೋಜ ಶಿರಹಟ್ಟಿ ಈ ಆ್ಯಪ್ ಆವಿಷ್ಕರಿಸಿದ ವಿದ್ಯಾರ್ಥಿ. ಇದಕ್ಕೆ ಕೋವಿ ಶಿಲ್ಡ್ ಎಂದು ಹೆಸರಿಟ್ಟಿರುವ ಈ ವಿದ್ಯಾರ್ಥಿ ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿಗೆ ಪತ್ರದ ಮುಖೇನ ಮಾಹಿತಿ ನೀಡಿದ್ದರು.

ಈ ಆ್ಯಪ್ ಅನುಕೂಲತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಿಎಂಒ ಕಚೇರಿ ಅಧಿಕಾರಿಗಳು ಇದು ಕೊವಿಡ್ ನಿಯಂತ್ರಣಕ್ಕೆ ಒಳ್ಳೆಯ ಸಲಹೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆಗೆ ಪತ್ರ ಬರೆದಿದ್ದಾರೆ. ಆ್ಯಪ್ ಆವಿಷ್ಕರಿಸಿರುವ ಮನೋಜ್ ಈ ಹಿಂದೆ ಆನ್ ಲೈನ್ ಮೂಲಕ ಜಾವಾ ತರಬೇತಿ ಪಡೆದಿದ್ದರು.

ಚೀನಾ ವಿ ಚಾಟ್ ಎಂಬ ಸ್ವದೇಶಿ ಆ್ಯಪ್ ಮೂಲಕ ಇಡೀ ದೇಶದ ಜನರ ಚಲನವಲನದ ಮೇಲೆ ನಿಗಾ ವಹಿಸಲು ಪ್ರಯತ್ನಿಸಿತ್ತು. ಅದರಂತೆ ಈ ಆ್ಯಪ್ ಭಾರತದಲ್ಲಿ ಸಹಕಾರಿ ಆಗಲಿದೆ ಎಂಬ ನಿರೀಕ್ಷೆ ವಿದ್ಯಾರ್ಥಿಯದ್ದಾಗಿದೆ.

ಏನಿದು ಆ್ಯಪ್?

ಕೊರೊನಾ ಪಾಸಿಟಿವ್ ವ್ಯಕ್ತಿಗಳ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚುವಲ್ಲಿ ಈ ಆಪ್ ಹೇಗೆ ಕೆಲಸ ಮಾಡಲಿದೆ ಎಂಬುದೇ ಈಗ ಕುತೂಹಲ ಸಂಗತಿ.

ಡಿಜಿಟಲ್ ಇಂಡಿಯಾ ಘೋಷಣೆ ನಂತರ ಈಗ ಬಹುತೇಕ ಕಡೆ ಗೂಗಲ್ ಪೇ , ಫೋನ್ ಪೇಯಂತಹ ಕ್ಯಾಶ್ ಲೆಸ್ ವ್ಯವಹಾರದ ಕ್ಯೂ ಆರ್ ಕೋಡ್ ಸಾಮಾನ್ಯವಾಗಿ ಬಳಸಲಾಗುತ್ತದೆ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಅಂಗಡಿ- ಮುಂಗಟ್ಟು, ಕಚೇರಿ, ಆಸ್ಪತ್ರೆ, ಮನೆಗಳಲ್ಲಿ ಕೋವಿ ಶಿಲ್ಡ್ ಕ್ಯೂ ಆರ್ ಕೊಡ್ ಹಾಕಬೇಕು. ಆಗ ಅಲ್ಲಿಗೆ ಭೇಟಿ ನೀಡುವ ಜನರು ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಈ ಕ್ಯೂ ಆರ್ ಕೋಡ್ ಸ್ಕ್ಯಾನ್‌ ಮಾಡಿದರೆ ಅಲ್ಲಿ ಒಂದು ಫಾರ್ಮ್ ಕ್ರಿಯೆಟ್ ಆಗಲಿದೆ. ಅದರಲ್ಲಿ ಆ ವ್ಯಕ್ತಿ ಮೊಬೈಲ್‌ ಸಂಖ್ಯೆ, ಹೆಸರು, ಇ- ಮೇಲ್ ದಾಖಲಾಗಲಿದೆ.

ಒಂದೊಮ್ಮೆ ಆ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದರೆ ಆತನ ಹೆಸರು ಇಲ್ಲವೇ ಮೊಬೈಲ್ ನಂಬರ್‌ ಅನ್ನು ಈ ಆ್ಯಪ್‌ನಲ್ಲಿ ದಾಖಲಿಸಿದರೆ ಆ ವ್ಯಕ್ತಿ ಯಾವಾಗ, ಎಲ್ಲೆಲ್ಲಿ ಭೇಟಿ ನೀಡಿದ್ದಾನೆ ಎಂಬುದರ ಮಾಹಿತಿ ಸಿಗಲಿದೆ. ಆ ವ್ಯಕ್ತಿಗೆ ಮಾತ್ರವಲ್ಲ ಅಂಗಡಿ, ಮನೆಗಳ ಮಾಲೀಕರಿಗೂ ಈ ಬಗ್ಗೆ ಸಷ್ಟತೆ ಸಿಗಲಿದೆ ಎನ್ನುತ್ತಾರೆ ಆ್ಯಪ್ ಆವಿಷ್ಕರಿಸಿದ ವಿದ್ಯಾರ್ಥಿ ಮನೋಜ್.

ಒಟ್ಟಾರೆಯಾಗಿ ಈ ಆ್ಯಪ್ ಇದೀಗ ಪ್ರಾಯೋಗಿಕ ಹಂತದಲ್ಲಿದ್ದು ಇದು ಕೊರೊನಾ ಪೀಡಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪತ್ತೆಗೆ ಅನುಕೂಲ ಆಗಲಿದೆ. ಇಲ್ಲಿ ವ್ಯಾಪಾರ- ವಹಿವಾಟಿಗೆ ಬರುವ ವ್ಯಕ್ತಿಯ ಮುಖ ಪರಿಚಯ, ಹೆಸರು ನೆನಪಿಡಲು ಸಾಧ್ಯ ಇಲ್ಲ.

ಈ ಆ್ಯಪ್ ಅಳವಡಿಸಿಕೊಂಡರೆ ಅಂತಹವರ ಭೇಟಿಯನ್ನು ಸುಲಭವಾಗಿ ಪತ್ತೆ ಹಚ್ಚಿ ಈ ಬಗ್ಗೆ ಸರಕಾರದ ಗಮನಕ್ಕೆ ತರಬಹುದು. ಒಟ್ಟಾರೆಯಾಗಿ ಈ ಹೊಸ ಆ್ಯಪ್‌ಗೆ ಇನ್ನಷ್ಟು ತಾಂತ್ರಿಕ ಬಲ ತುಂಬಿ ಯಶಸ್ವಿ ಆ್ಯಪ್ ಆಗಿ ರೂಪಗೊಳಿಸಬಹುದಾಗಿದೆ ಎಂಬುದು ಪ್ರಾಜ್ಞರ ಅಭಿಪ್ರಾಯ.

Comments are closed.