ಚಿಕ್ಕಮಗಳೂರು(ಏ. 28): ಪೊಲೀಸರು ಕಳ್ಳತನವಾದ ಮದ್ಯದಂಗಡಿಯ ಸ್ಥಳಪರಿಶೀಲನೆಗೆ ಬರುತ್ತಿದ್ದಂತೆ ಬಾರ್ ಒಪನ್ ಆಗಿದ್ದು ಕಂಡು ಬೆಳ್ಳಂಬೆಳಗ್ಗೆಯೇ ಬಾರ್ ಮುಂದೆ ನೂರಾರು ಜನ ಜಮಾಯಿಸಿದ ಘಟನೆ ಕಡೂರು ತಾಲೂಕಿನ ಯಗಟಿ ಬಳಿ ನಡೆದಿದೆ. ಜನರು ಮದ್ಯಕ್ಕಾಗಿ ಹತಾಶರಾಗಿದ್ದಾರೆನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ.
ಜನ ಎಷ್ಟರ ಮಟ್ಟಿಗೆ ಎಣ್ಣೆ-ಎಣ್ಣೆ ಅಂತಿದ್ದಾರೆ ಅಂದ್ರೆ, ಬೆಳಗ್ಗೆದ್ದು ದೇವರ ಮುಖ ನೋಡ್ತಾರೋ ಇಲ್ವೋ ಗೊತ್ತಿಲ್ಲ. ಎಣ್ಣೆ ಅಂಗಡಿ ಓಪನ್ ಆಗುತ್ತಾ, ಸಿಎಂ ಏನಾದ್ರು ಹೇಳ್ತಾರಾ ಅಂತ ಟಿವಿ ಹಾಕುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಯಗಟಿ ಬಳಿ ಓರ್ವ ವ್ಯಕ್ತಿ ಎಣ್ಣೆ ಅಂಗಡಿ ಓಪನ್ ಆಗಿದೆ ಎಂದು ಸ್ನೇಹಿತರಿಗೆ ಹೇಳಿದ್ದೇ ತಡ. ಎದ್ವೋ-ಬಿದ್ವೋ ಅಂತ ಯಗಟಿ ಸುತ್ತಮುತ್ತಲಿನ ನೂರಾರು ಜನರು ಬೆಳ್ಳಂಬೆಳಗ್ಗೆಯೇ ಯಳ್ಳಂಬಳಸೆ ಗ್ರಾಮದ ಬಾರ್ ಮುಂದೆ ಜಮಾಯಿಸಿಬಿಟ್ಟಿದ್ದರು.
ಸ್ಥಳಕ್ಕೆ ಬಂದ ಮದ್ಯಪ್ರಿಯರಿಗೆ ಪೊಲೀಸರು ಸಮಾಧಾನ ಹೇಳಿ ವಾಪಸ್ ಕಳುಹಿಸಬೇಕಾಯಿತು. ಅಯ್ಯೋ ಪುಣ್ಯಾತ್ಮ, ಬಾರ್ ಒಪನ್ ಆಗಿಲ್ಲ, ನಿನ್ನೆ ರಾತ್ರಿ ಬಾರ್ ಕಳ್ಳತನವಾಗಿದೆ. ಸ್ಪಾಟ್ ಮಹಜರ್ಗೆ ಬಂದಿದ್ದೇವೆ. ಮೇ 15ರತನಕ ಬಾರ್ ಕಡೆ ಬರಬೇಡಿ ಎಂದು ತಿಳಿ ಹೇಳಿ ವಾಪಸ್ ಕಳಿಸಿದ್ದಾರೆ.
ಎಣ್ಣೆ ಆಸೆಯಿಂದ ಬಂದ ಮದ್ಯಪ್ರಿಯರು ಬಂದ ದಾರಿಗೆ ಸುಂಕವಿಲ್ಲ ಎಂದು ತಮ್ಮ ತಮ್ಮ ಊರಿಗೆ ವಾಪಸ್ ಹೋಗಿದ್ದಾರೆ.
ಲಾಕ್ ಡೌನ್ ಘೋಷಿಸಿದಾಗಿನಿಂದಲೂ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿದೆ. ಅನೇಕ ಕಡೆ ಮದ್ಯವ್ಯಸನಿಗಳು ಹತಾಶರಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಕೆಲವರು ಮದ್ಯ ಸಿಗದ ಹತಾಶೆಯಲ್ಲಿ ಆತ್ಮಹತ್ಯೆ ಕೂಡ ಮಾಡಿಕೊಂಡ ಪ್ರಕರಣಗಳಿವೆ. ಇದೇ ವೇಳೆ, ಮದ್ಯ ಮಾರಾಟದಿಂದ ಉತ್ತಮ ವರಮಾನ ಹೊಂದಿದ್ದ ರಾಜ್ಯ ಸರ್ಕಾರಕ್ಕೂ ಮದ್ಯ ನಿಷೇಧದಿಂದ ಅಪಾರ ನಷ್ಟವಾಗುತ್ತಿದೆ. ಮೇ 3ರ ನಂತರ ಕೆಲ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಹುದು ಎಂಬ ಮಾತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಇದೇ ಸಲಹೆ ನೀಡಿದ್ದಾರೆ.
Comments are closed.