ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಸೋಮವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಸಾಯುವ ಮುನ್ನ ”ನನಗೆ ತುಂಬಾ ಹಸಿವಾಗಿದೆ. ದಯವಿಟ್ಟು ನನಗೆ ಇನ್ನೊಂದು ಇಡ್ಲಿ ಕೊಡಿ” ಎಂದು ಕೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ಆಟೋರಿಕ್ಷಾ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊರೊನಾ ಸೋಂಕಿತ ಸಂಖ್ಯೆ (P 466) ಸಾಯುವ ಮುನ್ನ ಆಡಿದ್ದ ಕೊನೆಯ ಮಾತುಗಳು ಇವು.
ದಕ್ಷಿಣ ಬೆಂಗಳೂರಿನ ತಿಲಕ್ ನಗರ ನಿವಾಸಿಯಾಗಿದ್ದ ಈತನ ಕೋರಿಕೆಗೆ ಆಸ್ಪತ್ರೆ ಸಿಬ್ಬಂದಿ ಅಚ್ಚರಿ ಪಟ್ಟಿದ್ದರು. ಆದರೆ, ಆತ ಸಿಬ್ಬಂದಿಯ ದಾರಿ ತಪ್ಪಿಸಲು ಈ ಮಾತುಗಳನ್ನಾಡಿದ್ದ ಎಂದು ತಿಳಿದುಬಂದಿದೆ. ನಂತರ ಸಿಬ್ಬಂದಿ ಹೊರಹೋದ ಕ್ಷಣಗಳಲ್ಲಿ ರೋಗಿಯು ಐಸಿಯುನಿಂದ ಹೊರಗೆ ಓಡಿ, ಫೈರ್ ಎಕ್ಸಿಟ್ ತೆರೆದು ವಿಕ್ಟೋರಿಯಾ ಆಸ್ಪತ್ರೆಯಿಂದ ನೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂತರ ಆಸ್ಪತ್ರೆಯ ಛಾವಣಿಯಿಂದ ಶಬ್ದ ಕೇಳುತ್ತಿದ್ದಂತೆ ಆಸ್ಪತ್ರೆಯ ನೌಕರರು ಹೊರಗೆ ಧಾವಿಸಿದ್ದು, ಆ ವೇಳೆಗೆ ಕೊರೊನಾ ಸೋಂಕಿತ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಅಲ್ಲದೆ, ಏಪ್ರಿಲ್ 24 ರಂದು ಕೊರೊನಾ ಸೋಂಕಿತನೆಂದು ಧೃಡಪಟ್ಟಿದ್ದ ಈತ ಭಾನುವಾರ ಐಸಿಯುನಲ್ಲಿ ಮೃತಪಟ್ಟ ಕೋವಿಡ್ 19 ಮಹಿಳಾ ರೋಗಿಯನ್ನು ನೋಡಿದ ಬಳಿಕ ತೀವ್ರ ಹೆದರಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ”ಚಾಲಕ ಮತ್ತು 45 ವರ್ಷದ ಮಹಿಳೆ (ಪಿ 465) ಇಬ್ಬರಿಗೂ ಒಂದೇ ದಿನ ವೈರಾಣು ಸೋಂಕು ತಗುಲಿರುವುದು ಧೃಡಪಟ್ಟಿತ್ತು. ಇಬ್ಬರೂ ತೀವ್ರ ಉಸಿರಾಟದ ಸೋಂಕು (ಸಾರಿ) ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಮಹಿಳೆಯ ಸ್ಥಿತಿ ಹದಗೆಡುತ್ತಿರುವುದನ್ನು ನೋಡಿ ಆತ ವಿಚಲಿತನಾಗಿದ್ದ” ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಮಹಿಳೆಯ ಸಾವಿನ ನಂತರ, ಐಸಿಯುನಲ್ಲಿ ನಾಲ್ಕು ರೋಗಿಗಳು ಉಳಿದಿದ್ದರು, ಮತ್ತು ಅವರ ಅನುಪಸ್ಥಿತಿಯನ್ನು ಉಳಿದವರು ಅನುಭವಿಸಿದ್ದರು ಎಂದೂ ಸಿಬ್ಬಂದಿ ತಿಳಿಸಿದ್ದಾರೆ.
ಕುಟುಂಬದಿಂದ ಯಾವುದೇ ಕರೆಗಳು ಬರದೆ ಅಸಮಾಧಾನಗೊಂಡಿದ್ದ!
P 466 ನ್ಯುಮೊನಿಯಾ ಜತೆಗೆ ದೀರ್ಘಕಾಲದಿಂದ ಮೂತ್ರಪಿಂಡ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಹೆಪಟೈಟಿಸ್ ಸಿ ಸೋಂಕನ್ನು ಹೊಂದಿದ್ದರು. ಅಲ್ಲದೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ಬಳಿಕ ಏಪ್ರಿಲ್ 25 ರಂದು ಡಯಾಲಿಸಿಸ್‌ಗೆ ಒಳಗಾಗಿದ್ದರು. “ಅವರು ಅನೇಕ ಕಾಯಿಲೆಗಳನ್ನು ಹೊಂದಿದ್ದರು, ತಾನು ಶೀಘ್ರದಲ್ಲೇ ಸಾಯುತ್ತೇನೆ ಎಂದು ಅವರು ಹೇಳಿಕೊಳ್ಳುತ್ತಿದ್ದರು ಮತ್ತು ಕೋವಿಡ್ -19 ಬಂದ ಬಳಿಕ ಮತ್ತಷ್ಟು ಬೇಸರವಾಗಿದ್ದರು” ಎಂದು ಚಾಲಕನ ಜತೆ ಐಸಿಯುನಲ್ಲಿದ್ದ ಇನ್ನೊಬ್ಬ ರೋಗಿ ಹೇಳಿದರು.
ಅಲ್ಲದೆ, ಆಸ್ಪತ್ರೆಗೆ ದಾಖಲಾದ ದಿನದಿಂದ ಅವರ ಕುಟುಂಬ ಸದಸ್ಯರು ಯಾರೂ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಪ್ರಯತ್ನಿಸಲಿಲ್ಲ ಮತ್ತು ಇದು ಅವರನ್ನು ಮತ್ತಷ್ಟು ಅಸಮಾಧಾನಗೊಳಿಸಿತ್ತು ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಅವರ ಕುಟುಂಬದವರು ಯಾರಾದರೂ ಕರೆ ಮಾಡಿದ್ದಾರಾ ಎಂದು ಪ್ರತಿದಿನ ನಮ್ಮನ್ನು ಕೇಳುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.
ಜತೆಗೆ “ನಾನು ಮದುವೆಯಾಗಲಿಲ್ಲ ಮತ್ತು ಈಗ ತಿಲಕ್‌ನಗರದವರೆಲ್ಲರೂ ನನ್ನನ್ನು ಶಪಿಸುತ್ತಿರಬೇಕು. ನಾನು ಏನು ಮಾಡಬೇಕು? ನಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ” ಎಂದು ಅವರು ಆರೋಗ್ಯ ಅಧಿಕಾರಿಯೊಬ್ಬರಿಗೆ ಸಾಯುವ ಹಿಂದಿನ ದಿನ ರಾತ್ರಿ ಹೇಳಿದ್ದರು ಎನ್ನಲಾಗಿದೆ.
ಇನ್ನೊಂದೆಡೆ, ಮುನ್ನಾ ಭಾಯ್ ಎಂಬಿಬಿಎಸ್ ಚಿತ್ರದ ದೃಶ್ಯಗಳನ್ನು ಅವರು ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು. ಅದರಲ್ಲಿ ಟಿಬಿ ರೋಗಿಯೊಬ್ಬರು ಮದುವೆಯಾಗದೇ ಚಿಕ್ಕ ವಯಸ್ಸಿನಲ್ಲೇ ಸಾಯುತ್ತಾನೆ.
ಟ್ರಾಮಾ ಕೇರ್ ಸೆಂಟರ್‌ಗೆ ಸೇರಿದ ಬಳಿಕ ಅವರು ಒಮ್ಮೆ ಡಯಾಲಿಸಿಸ್‌ಗೆ ಒಳಗಾಗಿದ್ದರು. ಸೋಮವಾರ ಮತ್ತೊಂದು ಡಯಾಲಿಸಿಸ್ ಅನ್ನು ನಿಗದಿಪಡಿಸಲಾಗಿತ್ತು ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲ ಡಾ.ರಮೇಶ್ ಕೃಷ್ಣ ಹೇಳಿದರು. ಆದರೆ, ಪಿ 466 ಕೋವಿಡ್ ಅಲ್ಲದ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.