ಬೆಂಗಳೂರು: ಬುಧವಾರ ರಾಜ್ಯದಲ್ಲಿ 12 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 535ಕ್ಕೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಕೇವಲ 34 (ಭಾನುವಾರ 3, ಸೋಮವಾರ 8, ಮಂಗಳವಾರ 11) ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್-19 ಅಬ್ಬರ ತಣ್ಣಗಾದಂತೆ ಕಾಣಿಸುತ್ತಿದೆ.
ಕೊರೊನಾದಿಂದ ತುಮಕೂರಿನಲ್ಲಿ 73 ವರ್ಷದ ವೃದ್ಧರೊಬ್ಬರು (ಪಿ-535) ಏಪ್ರಿಲ್ 26 ರಂದು ಸಾವನ್ನಪ್ಪಿದ್ದರು. ಇವರಿಗೆ ಸೋಂಕು ಇರುವುದು ಬುಧವಾರ ಸಂಜೆ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 21ಕ್ಕೆ ಏರಿದೆ.
ಹೊಸದಾಗಿ ವರದಿಯಾಗಿರುವ 12 ಪ್ರಕರಣಗಳಲ್ಲಿ 8 ಕಲಬುರಗಿ ಜಿಲ್ಲೆಗೆ ಸೇರಿದ್ದರೆ, ತಲಾ ಒಂದು ಪ್ರಕರಣ ಬೆಳಗಾವಿ, ದಾವಣಗೆರೆ, ತುಮಕೂರು ಮತ್ತು ಮೈಸೂರಿನ ನಂಜನಗೂಡಿನಿಂದ ವರದಿಯಾಗಿದೆ.
ಕಲಬುರಗಿಯಲ್ಲಿ ವರದಿಯಾಗಿರುವ ಪ್ರಕರಣಗಳಲ್ಲಿ ನಾಲ್ಕುವರೆ ವರ್ಷ, 12, 14 ಮತ್ತು 17 ವರ್ಷದ ಹೆಣ್ಣು ಮಕ್ಕಳು ಸೇರಿದ್ದಾರೆ. ಬೆಳಗಾವಿಯಲ್ಲೂ 12 ವರ್ಷ ಬಾಲಕನಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ವಿಶೇಷವೆಂದರೆ ಬರೋಬ್ಬರಿ 34 ದಿನಗಳ ಬಳಿಕ ದಾವಣಗೆರೆಯ ನರ್ಸ್ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಜಿಲ್ಲೆ ಹಸಿರು ವಲಯಕ್ಕೆ ಹೋಗಿ ಒಂದಷ್ಟು ನಿರ್ಬಂಧಗಳು ಸಡಲಿಕೆಯಾದ ಬೆನ್ನಲ್ಲೇ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಮತ್ತೆ ಲಾಕ್‌ಡೌನ್ ಕಠಿಣವಾಗುತ್ತಿದೆ. ಪ್ರಕರಣ ಪತ್ತೆಯಾಗಿರುವ ಭಾಷಾನಗರಕ್ಕೆ ಡಿಸಿ, ಎಸ್ಪಿ ಭೇಟಿ ನೀಡಿ ಲಾಕ್‌ಡೌನ್ ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದ್ದಾರೆ.
297 ಸಕ್ರಿಯ ಪ್ರಕರಣ
ಬುಧವಾರ ಒಟ್ಟು 9 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು 297ಕ್ಕೆ ತಲುಪಿದೆ. ಇವರಲ್ಲಿ 290 ರೋಗಿಗಳ ಆರೋಗ್ಯ ಸ್ಥಿರವಾಗಿದೆ. ಏಳು ರೋಗಿಗಳಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಸಕ್ರಿಯ ಪ್ರಕರಣಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬೆಳಗಾವಿ ಇದೆ. ಮೂರನೇ ಸ್ಥಾನಕ್ಕೆ ಕಲಬುರಗಿ ಮತ್ತು ನಾಲ್ಕನೇ ಸ್ಥಾನಕ್ಕೆ ವಿಜಯಪುರ ಜಿಲ್ಲೆಗಳು ಬಡ್ತಿ ಪಡೆದಿವೆ. ಮೈಸೂರು ಐದನೇ ಸ್ಥಾನಕ್ಕೆ ಜಾರಿದೆ. ಕಾರಣ ಜಿಲ್ಲೆಯಲ್ಲಿ ಹೆಚ್ಚಿನ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸೋಂಕಿಗೆ 21ನೇ ಬಲಿ
ಬುಧವಾರ ಸಂಜೆಯ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆಯಾದ ನಂತರ ತುಮಕೂರಿನಲ್ಲಿ ಏಪ್ರಿಲ್ 26ರಂದೇ ಸಾವನ್ನಪ್ಪಿದ್ದ 73 ವರ್ಷದ ವ್ಯಕ್ತಿಯೊಬ್ಬರಿಗೆ (ಪಿ-535) ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಅಸ್ತಮಾ, ಡಯಾಬಿಟಿಸ್, ಸಿಒಪಿಡಿ ಕಾಯಿಲೆಯೂ ಇತ್ತು. ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ 21 ಜನರು ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದಂತಾಗಿದೆ. ಇನ್ನು ಬೆಂಗಳೂರಿನ ಸೋಂಕಿತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ 22 ಕೋವಿಡ್-19 ಸೋಂಕಿತರನ್ನು ಕಳೆದುಕೊಂಡಿದೆ.
Comments are closed.