ಕರ್ನಾಟಕ

ಮೈಸೂರಿನ ಬದನವಾಳುವಿನಲ್ಲಿ ಚಾಪೆ ಮೇಲೆ ಮಲಗಿದ್ದ ನಟ ಇರ್ಫಾನ್​ ಖಾನ್

Pinterest LinkedIn Tumblr


ಮೇಲ್ಛಾವಣಿಯೇ ಇಲ್ಲದ ಕಟ್ಟಡದ ಗೋಡೆಗಳು ಎಂದೋ ಬಿರುಕು ಬಿಟ್ಟು, ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿತ್ತು. ನೋಡುವುದಕ್ಕೆ ಭೂತದ ಬಂಗಲೆ ತರಹ ಕಾಣುತ್ತಿದ್ದ, ಈ ಕಟ್ಟಕಡ ಇತಿಹಾಸ ಮಾತ್ರ ಅಸಾಮಾನ್ಯವಾದುದ್ದು.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು 1925ರಲ್ಲಿ ಗಾಂಧಿವಾದಿ ತಗಡೂರು ರಾಮಚಂದ್ರರಾಯರು ನಿರ್ಮಿಸಿದ್ದರು. 1932ರಲ್ಲಿ ಮಹಾತ್ಮ ಗಾಂಧಿ ಅವರು ಈ ಕೇಂದ್ರಕ್ಕೆ ಭೇಟಿ ಸಹ ನೀಡಿದ್ದರು. ಆಗ ಸ್ಥಾಪನೆಯಾಗಿದ್ದ ಈಗ ಪಾಳು ಬಿದ್ದ ಈ ಕಟ್ಟಡದಲ್ಲಿ 2015ರ ಏಪ್ರಿಲ್​ನಲ್ಲಿ ಹೆಸರಾಂತ ರಂಗಕರ್ಮಿ ಪ್ರಸನ್ನ ಮತ್ತು ಅವರ ತಂಡದವರು ಬೀಡುಬಿಟ್ಟಿದ್ದರು.

ಆಳುವ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ನಗರಗಳತ್ತ ಗಮನಹರಿಸಿ ಹಳ್ಳಿಯ ಸೊಗಡನ್ನೇ ಸೊರಗುವಂತೆ ಮಾಡಿವೆ. ಹಳ್ಳಿಗರಿಗೆ ಸುಸ್ಥಿರ ಬದುಕು ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಂಗಕರ್ಮಿ ಪ್ರಸನ್ನ ಅವರು ಯಂತ್ರ ನಾಗರಿಕತೆ ನಿಗ್ರಹಿಸೋಣ, ಶ್ರಮಸಹಿತ ಬದುಕನ್ನು ಪೋಷಿಸೋಣ ಎಂಬ ಉದ್ದೇಶದೊಂದಿಗೆ ಈ ಚಳವಳಿ ಆರಂಭಿಸಿದ್ದರು. ಈ ಹೋರಾಟಕ್ಕೆ ರೈತರು, ವಿದ್ಯಾರ್ಥಿಗಳು, ಚಿಂತಕರು ಹಾಗೂ ನಟರು ಸೇರಿ ಸಾವಿರಾರು ಮಂದಿ ಬೆಂಬಲ ಸೂಚಿಸಿದ್ದರು. ಅವರಲ್ಲಿ ಬಾಲಿವುಡ್ ನಟ ಹಾಗೂ ಪ್ರಸನ್ನ ಅವರ ಅತ್ಯಾಪ್ತ ಶಿಷ್ಯ ಇರ್ಫಾನ್ ಖಾನ್ ಅವರು ಕೂಡ ಒಬ್ಬರು.

ನಟ ಇರ್ಫಾನ್​ ಖಾನ್ ಅವರು ರಂಗಭೂಮಿಯ ತಮ್ಮ ನೆಚ್ಚಿನ ಗುರುಗಳಾದ ಪ್ರಸನ್ನ ಅವರು ನಡೆಸುತ್ತರುವ ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶಕ್ಕೆ ಬೆಂಬಲ ನೀಡಲು ಅವರ ಹೆಂಡತಿ ಸುತಪ ಸಿಕ್ಲರ್​ ಅವರೊಂದಿಗೆ 2015ರ ಏಪ್ರಿಲ್ 10ರಂದು ಬದನವಾಳು ಗ್ರಾಮಕ್ಕೆ ಬಂದು, ಪಾಳುಬಿದ್ದ ಈ ಕಟ್ಟಡದಲ್ಲಿ ತಂಗಿದ್ದರು.

ಬದನವಾಳಿಗೆ ಬಂದ ಶಿಷ್ಯನನ್ನು ಸ್ವಾಗತಿಸಿದ ಪ್ರಸನ್ನ ಅವರು ಅಂಗಳ ಕಟ್ಟೆಯ ಮೇಲೆ ಚಾಪೆ ಹಾಸಿ ಅವರನ್ನು ಕೂರಿಸಿದ್ದರು. ಸ್ವಲ್ಪ ಸಮಯದ ಚಾಪೆಯ ಮೇಲೆ ಕುಳಿತು ವಿಶ್ರಾಂತಿ ಪಡೆದ ಇರ್ಫಾನ್ ಬಳಿಕ ಸೌದೆ ಒಲೆಯಲ್ಲಿ ತಯಾರಿಸಿದ ಊಟ ಸವಿದರು. ಆನಂತರ ಬಯಲಿನ ಕಟ್ಟೆಯ ಮೇಲೆ ಸೊಳ್ಳೆ ಪರದೆ ಕಟ್ಟಿಕೊಂಡು ಚಾಪೆಯ ಮೇಲೆ ಅಂದು ರಾತ್ರಿ ನಿದ್ದೆ ಮಾಡಿದ್ದರು. ಬೆಳಗ್ಗೆ ಎದ್ದು ಹೆಂಡತಿಯೊಂದಿಗೆ ಗ್ರಾಮದ ಸುತ್ತ ಒಂದು ವಾಕ್​ ಮಾಡಿ, ಬಯಲಿನಲ್ಲಿಯೇ ನಿತ್ಯಕರ್ಮ ಮುಗಿಸಿದ್ದರು. ಬಳಿಕ ಪ್ರಸನ್ನ ಅವರು ಸೌದೆ ಒಲೆಯಲ್ಲಿ ತಯಾರಿಸಿದ್ದ ರಾಗಿ ಅಂಬಲಿ, ಹಾಗೂ ಬೆಲ್ಲದ ಟೀ ಕುಡಿದಿದ್ದರು. ಪ್ರಸನ್ನ ಮತ್ತು ತಂಡದವರೊಂದಿಗೆ ಹಲವು ಹೊತ್ತು ಚರ್ಚೆ ನಡೆಸಿ, ಬಳಿಕ ಅಲ್ಲಿಂದ ನಿರ್ಗಮಿಸಿದ್ದರು.

Comments are closed.