ಬೆಂಗಳೂರು(ಏ.30): ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಪೌರ ಕಾರ್ಮಿಕರಿಗೆ 30 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ಘೋಷಿಸಿದೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಕೊರೋನಾ ವಿರುದ್ಧದ ಸಮರದಲ್ಲಿ ಸಾವನ್ನಪ್ಪುವ ವಾರಿಯರ್ಸ್ಗೆ 30 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಲಾಗಿದೆ.
ಮೊದಲಿಗೆ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುವಾಗ ಮಡಿಯುವ ವೈದ್ಯರಿಗೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದರು. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಮತ್ತು ಆರೋಗ್ಯ ಸೇವೆ ಮಾಡುವ ಸಿಬ್ಬಂದಿಗೆ ಮೊದಲು ಸೋಂಕು ತಗಲುವ ಸಾಧ್ಯತೆ ಇದೆ. ಇದರಿಂದ ಜೀವಕ್ಕೆ ಅಪಾಯವಿದೆ ಎಂದು ಹಲವರಲ್ಲಿ ಆತಂಕ ಇದೆ. ಇಂತವರಿಗೆ ಧೈರ್ಯ ತುಂಬುವ ಸಲುವಾಗಿ ಒಂದು ವೇಳೆ ಆರೋಗ್ಯ ಸೇವೆಯಲ್ಲಿ ಯಾರಾದರೂ ಮಡಿದರೇ ದೆಹಲಿ ಸರ್ಕಾರ 1 ಕೋಟಿ. ರೂ ಪರಿಹಾರ ನೀಡಲಿದೆ ಎಂದು ಕೇಜ್ರಿವಾಲ್ ಹೇಳಿದ್ದರು.
ಇದಾದ ಬೆನ್ನಲ್ಲೇ ಇತ್ತೀಚೆಗೆ ಕೋವಿಡ್-19 ವಿರುದ್ಧ ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ವೈದ್ಯರು ಮತ್ತು ಪೊಲೀಸರಂತೆಯೇ ಪತ್ರಕರ್ತರಿಗೂ 15 ಲಕ್ಷ ರೂ. ಜೀವ ವಿಮೆ ಸೌಲಭ್ಯವನ್ನು ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದರು. ಇದಕ್ಕೂ ಮುನ್ನ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹೀಗೊಂದು ನಿರ್ಧಾರ ಪ್ರಕಟಿಸಿದ್ದರು.
ದೇಶದಲ್ಲಿ ಲಾಕ್ಡೌನ್ ಅಂತ್ಯಗೊಳ್ಳಲು ಮೂರೇ ದಿನ ಬಾಕಿ ಇದೆ. ಆದರೆ, ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇವಲ 12 ಗಂಟೆಯಲ್ಲಿ ಒಟ್ಟು 22 ಹೊಸ ಕೊರೋನಾ ಕೇಸುಗಳು ಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಮಾರಕ ಸೋಂಕಿನ ಭೀತಿ ಮತ್ತಷ್ಟು ಹೆಚ್ಚಾಗಿದೆ.
ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೆ ಬರೋಬ್ಬರಿ 22 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 557ಕ್ಕೆ ಏರಿಕೆಯಾಗಿದೆ. ಕೊರೋನಾದಿಂದಾಗಿ 21 ಜನರು ಸಾವನ್ನಪ್ಪಿದ್ದು, ಓರ್ವ ಕೊರೋನಾ ರೋಗಿ ಆತ್ಮಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದಿದ್ದಾನೆ. ಈಗಾಗಲೇ 223 ಜನರು ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Comments are closed.