ಕರ್ನಾಟಕ

ಮದ್ಯಕ್ಕೆ ದುಡ್ಡು ಕೊಡದ ಹೆಂಡತಿಗೆ ಸ್ಕೂಟರ್ ಡಿಕ್ಕಿ ಹೊಡೆಸಿ ಕೊಂದ!

Pinterest LinkedIn Tumblr


ಬಾಗಲಕೋಟೆ: ರಾಜ್ಯದಲ್ಲಿ ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಹಾವನ್ನೇ ಕಚ್ಚಿ ತಿಂದಿದ್ದರಿಂದ ಹಿಡಿದು ಹಲವು ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ. ಇದೀಗ ಬಾಗಲಕೋಟೆಯಲ್ಲಿ ಮದ್ಯ ಕುಡಿಯಲು ಹಣ ಕೊಡದ ಪತ್ನಿಗೆ ಹಿಂಬದಿಯಿಂದ ಸ್ಕೂಟರ್ ಡಿಕ್ಕಿ ಹೊಡೆಸಿ ಕುಡುಕ ಪತಿಯೊಬ್ಬ ಕೊಲೆ ಮಾಡಿದ್ದಾನೆ.

ಮದ್ಯ ಖರೀದಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಇಳಕಲ್‌ನ ಚಂದಪ್ಪ ಎಂಬಾತ ಸೋಮವಾರ ಪತ್ನಿಗೆ ಸ್ಕೂಟರ್‌ ಡಿಕ್ಕಿ ಹೊಡೆಸಿದ್ದ. ಸ್ಕೂಟರ್‌ ತಾಗಿದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಪತ್ನಿ ಶಾರದಾ (36) ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಸಾವನ್ನಪ್ಪಿದ್ದಾರೆ. ಪತಿ ಚಂದಪ್ಪ ಅವರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದು, ಸ್ಕೂಟರ್‌ ಜಪ್ತಿ ಮಾಡಿದ್ದಾರೆ.

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿದ್ದು ಕಳೆದ ಒಂದು ತಿಂಗಳಿನಿಂದ ಚಂದಪ್ಪನಿಗೆ ಮದ್ಯ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಸೋಮವಾರ ಮದ್ಯ ಮಾರಾಟ ಆರಂಭವಾಗಿದ್ದರಿಂದ ಮದ್ಯ ಖರೀದಿಸುವ ಉತ್ಸಾಹದಲ್ಲಿದ್ದ.

ಪತ್ನಿ ಶಾರದಾ ಇಳಕಲ್ ನಗರದ ಜೋಸಿ ಗಲ್ಲಿಯಲ್ಲಿ ಬಾಂಡೆ ತಿಕ್ಕುವ ಕೆಲಸಕ್ಕೆ ಹೋಗಿ ಬರುವಾಗ ಕುಡಿಯಲು ಹಣ ಕೇಳಿದ್ದ. ಕೊಡದಿದ್ದಾಗ ಸಿಟ್ಟಾಗಿ ಪತ್ನಿಗೆ ಸ್ಕೂಟರ್ ಗುದ್ದಿದ್ದ. ಗುದ್ದಿದ ರಭಸಕ್ಕೆ ಪತ್ನಿ ಶಾರದಾಗೆ ತಲೆ, ಭುಜಕ್ಕೆ ಗಂಭೀರ ಗಾಯವಾಗಿತ್ತು.

ಈ ಸಂಬಂಧ ಮಗ ರಾಮು ಪೊಲೀಸರಿಗೆ ದೂರು ನೀಡಿದ್ದ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಚಂದಪ್ಪನನ್ನು ಬಂಧಿಸಿದ್ದು, ಇಳಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.