ಕರ್ನಾಟಕ

ರಾಜ್ಯದಲ್ಲಿ ಕೊರೋನಾಗೆ 2 ಸಾವು; 22 ಹೊಸ ಪ್ರಕರಣಗಳು

Pinterest LinkedIn Tumblr


ಬೆಂಗಳೂರು(ಮೇ 05): ವಿಜಯಪುರ ಮತ್ತು ದಾವಣಗೆರೆಯಲ್ಲಿ ಇಬ್ಬರು ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ಇದರೊಂದಿಗೆ ಕೊರೋನಾದಿಂದ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ಏರಿದೆ. ನಿನ್ನೆ ಸಂಜೆ 5ರಿಂದ ಇವತ್ತು ಸಂಜೆಯವರೆಗೆ 22 ಹೊಸ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ ಒಟ್ಟಾರೆ ಸೋಂಕು ಪ್ರಕರಣ ಸಂಖ್ಯೆ 673ಕ್ಕೇರಿದೆ. ಕರ್ನಾಟಕ ಆರೋಗ್ಯ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್​ನಲ್ಲಿ ಈ ಮಾಹಿತಿ ಇದೆ.

ಹೊಸ 22 ಪ್ರಕರಣಗಳಲ್ಲಿ ಸಿಂಹಪಾಲು ದಾವಣಗೆರೆಯದ್ದಾಗಿದೆ. ನಿನ್ನೆ ಸಂಜೆಯಿಂದ ಇಲ್ಲಿ 12 ಮಂದಿಗೆ ಸೋಂಕು ಇರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಮೂವರಿಗೆ ಸೋಂಕು ಹತ್ತಿದೆ. ಬಾಗಲಕೋಟೆಯಲ್ಲಿ ಇಬ್ಬರಿಗೆ, ಬಳ್ಳಾರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ ಮತ್ತು ಧಾರವಾಡದಲ್ಲಿ ತಲಾ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ದಾವಣಗೆರೆಯಲ್ಲಿ ಪತ್ತೆಯಾಗಿರುವ 12 ಹೊಸ ಪ್ರಕರಣಗಳಲ್ಲಿ ಪಿ-556 ಮತ್ತು ಪಿ-581 ಅವರಿಂದಲೇ ಸೋಂಕಿತರಾದವರಾಗಿದ್ದಾರೆ. ಬಾಗಲಕೋಟೆಯಲ್ಲಿ ಪಿ-367 ಮತ್ತು 368 ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ದಾವಣಗೆರೆಯ ರೋಗಿ ಪಿ-662 ವೈರಲ್ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾರೆ. ವಿಜಯಪುರದ ಪಿ-640 ರೋಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಈವರೆಗೆ 331 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ಧಾರೆ. ಈಗ 312 ಆ್ಯಟಿವ್ ಕೇಸ್​ಗಳಿವೆ. ಅವರಲ್ಲಿ ಆರು ಮಂದಿ ಐಸಿಯುನಲ್ಲಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ತಹಬದಿಯಲ್ಲಿದೆ.

ಇದನ್ನೂ ಓದಿ: ಪೌರಾಣಿಕ ಪಾತ್ರಗಳ ಮೂಲಕ ಕೊರೋನಾ ಜಾಗೃತಿ ಮೂಡಿಸಿದ ಪೊಲೀಸರುಮೈಸೂರಿನಲ್ಲಿ 88ರಲ್ಲಿದ್ದ ಆಕ್ಟಿವ್ ಕೇಸ್​​ಗಳ ಸಂಖ್ಯೆ ಇದೀಗ 8ಕ್ಕೆ ಇಳಿದಿದೆ. ನಿನ್ನೆಯಿಂದ ಅಲ್ಲಿ ಮೂವರು ಡಿಸ್​ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ ಅಲ್ಲಿ 80 ಮಂದಿ ಡಿಸ್​ಚಾರ್ಜ್ ಆದಂತಾಗಿದೆ. ರಾಜ್ಯದ ಇತರ ಕಡೆ ಹೋಲಿಸಿದರೆ ಅತಿ ಹೆಚ್ಚು ಡಿಸ್​​ಚಾರ್ಜ್ ಆಗಿರುವುದು ಮೈಸೂರಿನಲ್ಲೇ. ಬೆಂಗಳೂರಿನಲ್ಲಿ 75 ಮಂದಿ ಈವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುರೇಶ್ ಕುಮಾರ್ ಅವರು ಒಂದಷ್ಟು ಮಾಹಿತಿ ಹಂಚಿಕೊಂಡರು. ಮಾರ್ಚ್ ತಿಂಗಳಲ್ಲಿ ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 13ನೇ ಸ್ಥಾನಕ್ಕೆ ಇಳಿಯುವಲ್ಲಿ ಯಶಸ್ವಿಯಾಗಿದೆ. ಕೊರೋನಾ ಸೋಂಕು ಏರಿಕೆಯಲ್ಲಿ ದೇಶದಲ್ಲಿ ಸರಾಸರಿ ಏರಿಕೆ ದರ ಶೇ. 5.97 ಇದೆ. ಆದರೆ, ಕರ್ನಾಟಕದಲ್ಲಿ ಇದು ಶೇ. 3.13 ಇದೆ. ರಾಜ್ಯದಲ್ಲಿ ಸೋಂಕು ಏರಿಕೆ ನಿಯಂತ್ರಣದಲ್ಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Comments are closed.