ಬೆಂಗಳೂರು(ಮೇ.05): ಬಾಕಿಯಿರುವ ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ಪರೀಕ್ಷೆಗೆ ಸಿದ್ದತೆ ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಬಹುತೇಕ ಜೂನ್ ತಿಂಗಳಲ್ಲಿ ಇಂಗ್ಲಿಷ್ ಪರೀಕ್ಷೆ ನಡೆಸಲು ಇಲಾಖೆ ಚಿಂತಿಸಿದೆ. ಹಾಗಾಗಿ ಇದಕ್ಕೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಇಲಾಖೆಗೆ ಸಚಿವರು ಆದೇಶಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಾರ್ಚ್ 23ನೇ ತಾರೀಕಿನಂದೇ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಆದೇಶ ಹೊರಡಿಸಿದ್ದರು. ಕೊರೋನಾ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದೂಡಲಾಗಿದೆ. ಸದ್ಯದಲ್ಲೇ ದ್ವಿತೀಯ ಪಿಯು ಅಂತಿಮ ವಿಷಯದ ಪರೀಕ್ಷೆ ಯಾವಾಗ ನಡೆಯಲಿದೆ ಎಂದು ದಿನಾಂಕವನ್ನು ಪ್ರಕಟಿಸಲಾಗುವುದು. ಆಗ ವಿದ್ಯಾರ್ಥಿಗಳು ಯಾವುದೇ ಚಿಂತೆಯಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದ್ದರು.
ಈ ಮುನ್ನ ರಾಜ್ಯಾದ್ಯಂತ ಕೊರೋನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮಾ. 27ರಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಹಿಂದೆ ಖುದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದರು.
ಆದರೀಗ, ಶಿಕ್ಷಣ ಇಲಾಖೆಯೂ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜೂನ್ ಅಥವಾ ಜುಲೈನಲ್ಲಿ ನಡೆಸಲು ತೀರ್ಮಾನಿಸಿದೆ.
Comments are closed.