ಬೆಂಗಳೂರು: ವಲಸೆ ಕಾರ್ಮಿಕರು, ಪ್ರತಿಪಕ್ಷ ನಾಯಕರು ಹಾಗೂ ನಾಗರಿಕ ಹೋರಾಟಗಾರರ ತೀವ್ರ ಒತ್ತಡದಿಂದಾಗಿ ಶ್ರಮಿಕ್ ವಿಶೇಷ ರೈಲುಗಳನ್ನು ನಿಲ್ಲಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ರಾಜ್ಯ ಸರ್ಕಾರ, ನಾಳೆಯಿಂದ ಮೇ. 15ರವರೆಗೂ 9 ರಾಜ್ಯಗಳಿಗೆ 100ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ಇಂದು ನಿರ್ಧರಿಸಿದೆ.
ಈ ನಿರ್ಧಾರಕ್ಕೆ ಎರಡು ರಾಜ್ಯಗಳಿಗೆ ಈಗಾಗಲೇ ಸಮ್ಮತಿ ನೀಡಿವೆ. ಶುಕ್ರವಾರದಿಂದ ರೈಲುಗಳ ಓಡಾಟವನ್ನು ಪುನರ್ ಆರಂಭಿಸಬೇಕಾ ಅಥವಾ ಶನಿವಾರದಿಂದ ಆರಂಭಿಸಬೇಕಾ ಎಂಬುದನ್ನು ನಿರ್ಧರಿಸಬೇಕಾಗಿದೆ.
ಈ ಸಂಬಂಧ ಇಂದು ಬೆಳಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಹಾಗೂ ರೈಲ್ವೆ ವಿಭಾಗೀಯ ಮಟ್ಟದ ಮ್ಯಾನೇಜರ್ ಗಳು ಪಾಲ್ಗೊಂಡಿದ್ದರು. ವಿಶೇಷ ರೈಲುಗಳ ಓಡಾಟವನ್ನು ಪುನರ್ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವಲಸೆ ಕಾರ್ಮಿಕರಿಗಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿರುವ ಮಂಜುನಾಥ್ ಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಸರ್ಕಾರದ ನಿರ್ದೇಶನದಂತೆ, ಈ ರೈಲುಗಳ ಓಡಾಟಕ್ಕೆ ಅನುಮತಿ ನೀಡುವಂತೆ ವಿವಿಧ ರಾಜ್ಯಸರ್ಕಾರಗಳಿಗೆ ಪತ್ರ ಬರೆದಿದ್ದೇನೆ. ಜಾರ್ಖಂಡ್, ಬಿಹಾರ, ಒಡಿಶಾ, ಮಣಿಪುರ, ತ್ರಿಪುರಾ, ಪಶ್ಚಿಮ ಬಂಗಾಳ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಿಗೆ ಅಧಿಕೃತ ಮಾಹಿತಿಯನ್ನು ಕಳುಹಿಸಲಾಗಿದೆ. ಲಾಕ್ ಡೌನ್ ನಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಮತ್ತಿತರರಿಗೆ ಈ ರೈಲುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಎಂಟು ದಿನಗಳ ಅವಧಿಯಲ್ಲಿ ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ತಲಾ 16 ರೈಲುಗಳು, ರಾಜಸ್ತಾನ ಮತ್ತು ಮಧ್ಯಪ್ರದೇಶಕ್ಕೆ ತಲಾ 1, ಮಣಿಪುರ ಮತ್ತು ತ್ರಿಪುರಾಕ್ಕೆ ಪ್ರತಿದಿನ ಒಂದು ರೈಲು ಓಡಿಸಲು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. 8 ರೈಲುಗಳ ಓಡಾಟಕ್ಕೆ ಮಧ್ಯಪ್ರದೇಶ ಹಾಗೂ ಬಿಹಾರ ರಾಜ್ಯಗಳು ಈಗಾಗಲೇ ಅನುಮತಿ ನೀಡಿವೆ.
ಮೇ 3ರಿಂದ 5ನೇ ತಾರೀಖಿನವರೆಗೂ ಮೂರು ದಿನಗಳ ಕಾಲ ವಿಶೇಷ ರೈಲುಗಳ ಮೂಲಕ 8, 586 ವಲಸೆ ಕಾರ್ಮಿಕರು ಜಾರ್ಖಂಡ್, ಉತ್ತರ ಪ್ರದೇಶ, ರಾಜಸ್ತಾನ ಮತ್ತು ಒಡಿಶಾ ರಾಜ್ಯಗಳಿಗೆ ತೆರಳಿದ್ದಾರೆ. ಮೇ 6ರಿಂದ 10ರವರೆಗೂ ನಿರಂತರವಾಗಿ ಬಿಹಾರಕ್ಕೆ 10ರಿಂದ 15 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಸಜ್ಜಾಗಿದ್ದರೂ ಮೇ 5ರಂದು ಈ ರೈಲುಗಳ ಓಡಾಟವನ್ನು ನಿಲ್ಲಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಸರ್ಕಾರದ ಈ ನಿರ್ಧಾರ ಬಿಹಾರದಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅಸಂಖ್ಯಾತ ವಲಸೆ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಿತ್ತು.
Comments are closed.