ಕರ್ನಾಟಕ

ಬೆಳಗಾವಿ: ಪಾಳು ಕೊಳವೆ ಬಾವಿಗೆ ಬಿದ್ದ ರೈತ!

Pinterest LinkedIn Tumblr


ಬೆಳಗಾವಿ: ಮಾಧ್ಯಮಗಳು ಅದೆಷ್ಟೇ ಜಾಗೃತಿ ಮೂಡಿಸಿದರೂ ಪದೇಪದೆ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇವೆ ಪಾಳುಬಿದ್ದ ಕೊಳವೆ ಬಾವಿಗಳು. ಇದೀಗ ಇಂತಹದೇ ಮತ್ತೊಂದು ಪ್ರಕರಣ ಮರುಕಳಿಸಿದೆ.

ಸೋಮವಾರ ಕೂಡ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಕ್ಕೋಡಿಯಲ್ಲಿ ವಯಸ್ಕ ವ್ಯಕ್ತಿಯೇ ಕೊಳವೆ ಬಾವಿ ಪಾಲಾಗಿದ್ದಾನೆ.

38 ವರ್ಷದ ರೈತ ಸಂಗಪ್ಪ ದೊಡ್ಡಮನಿ ಅವರು ಕೊಳವೆ ಬಾವಿಗೆ ಬಿದ್ದಿರುವ ದುರ್ದೈವಿ. ಇವರು ಪಂಚೆ ಷರ್ಟು ಎಲ್ಲವನ್ನೂ ಬಿಚ್ಚಿಟ್ಟು ಕೊಳವೆ ಬಿದ್ದಿರುವುದು ಅನುಮಾನಕ್ಕೆ ಎಡೆಮಾಡಿದೆ. ಈ ರೈತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರಾ ಎಂಬ ಶಂಕೆಯೂ ವ್ಯಕ್ತವಾಗಿದೆ.

ಸ್ಥಳಕ್ಕೆ ತಹಸೀಲ್ದಾರ್‌ ಹಾಗೂ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ನೀರು ಬಾರದೆ ವಿಫಲವಾದ ಕೊಳವೆ ಬಾವಿಗಳನ್ನು ಕೂಡಲೇ ಮುಚ್ಚಿಬಿಡುವಂತೆ ಪದೇಪದೆ ಮಾಧ್ಯಮಗಳು ಜಾಗೃತಿ ಮೂಡಿಸುತ್ತಲೇ ಇವೆ. ಆದರೂ, ಜನ ಪಾಳು ಕೊಳವೆ ಬಾವಿಗಳನ್ನು ಹಾಗೆಯೇ ಬಿಡುತ್ತಿದ್ದಾರೆ. ಇಂತಹ ಕೊಳವೆ ಬಾವಿಗಳಿಗೆ ಬಿದ್ದು ಅದೆಷ್ಟೋ ಎಳೆಯ ಕಂದಮ್ಮಗಳು ಪ್ರಾಣ ಕಳೆದುಕೊಂಡಿವೆ. ಇದೀಗ 38 ವರ್ಷದ ರೈತನೇ ಕೊಳವೆ ಬಾವಿ ಪಾಲಾಗಿರುವ ಘಟನೆ ನಡೆದಿದೆ.

Comments are closed.