ಬೆಂಗಳೂರು: ಕೋವಿಡ್ -19 ರೋಗಿಗಳ ಸಂಪರ್ಕವಿಲ್ಲದ ಅಥವಾ ಲಾಕ್‌ಡೌನ್ ವೇಳೆ ಮನೆಯಿಂದ ಹೊರಗೇ ಬರದಿದ್ದರೂ ಪಾದರಾಯನಪುರದಲ್ಲಿ 7 ಮಂದಿಗೆ ಕೊರೊನಾ ವೈರಸ್ ಬಂದಿರುವುದು ಧೃಡಪಟ್ಟಿದೆ. ಈ ಹಿನ್ನೆಲೆ ಸರಕಾರಿ ಅಧಿಕಾರಿಗಳು ಈ ಪ್ರದೇಶದಲ್ಲಿ ಸಮುದಾಯಕ್ಕೆ ಸೋಂಕು ತಗುಲಿರುವ ಆತಂಕ ಎದುರಾಗಿದೆ ಎಂದಿದ್ದಾರೆ.
ಕ್ಲಸ್ಟರ್ ಸೋಂಕಿನ ನಂತರ ಒಂದು ತಿಂಗಳ ಹಿಂದೆಯೇ ಪಾದರಾಯನಪುರ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೂ ಇಲ್ಲಿ 47 ಕೊರೊನಾ ಪ್ರಕರಣಗಳು ಧೃಡಪಟ್ಟಿವೆ. ಈ ಪೈಕಿ ಕೋವಿಡ್ 19 ರೋಗಿಗಳ 16 ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 11 ಮಂದಿ ದ್ವಿತೀಯ ಸಂಪರ್ಕ ಹೊಂದಿದವರು ಎಂದು ವರದಿಯಾಗಿದೆ. ಅಲ್ಲದೆ, ರ‍್ಯಾಂಡಮ್ ಪರೀಕ್ಷೆಯಲ್ಲಿ 7 ಮಂದಿಗೆ ಧೃಡಪಟ್ಟಿದೆ. ಇನ್ನೂ 12 ಮಂದಿ ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದ್ದರೆ, ಉಳಿದ ಒಬ್ಬರು ಫೀವರ್ ಕ್ಲಿನಿಕ್‌ಗೆ ತೆರಳಿದ್ದವರಿಗೂ ಸೋಂಕು ಎದುರಾಗಿದೆ.
ಇನ್ನು, ಈ ಸಂಬಂಧ ಮಾಹಿತಿ ನೀಡಿದ ಬಿಬಿಎಂಪಿ, ಒಟ್ಟು 216 ಜನರ ದ್ರವ ಪರೀಕ್ಷೆ ನಡೆಸಿ ಟೆಸ್ಟ್‌ಗೆ ಕಳಿಸಲಾಗಿದ್ದು, ಈ ಪೈಕಿ 7 ಮಂದಿಯಲ್ಲಿ ಕೊರೊನಾ ಧೃಡಪಟ್ಟಿದೆ. ಇನ್ನೂ ಹಲವರ ವರದಿ ಬರಬೇಕಿದ್ದು ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸಮುದಾಯಕ್ಕೆ ಹರಡಿಸರುವ ಅನುಮಾನವಿರುವುದರಿಂದ ಈ ಪ್ರದೇಶದಲ್ಲಿ ರ‍್ಯಾಂಡಮ್ ಪರೀಕ್ಷೆಯ ಸಂಖ್ಯೆ ತೀವ್ರಗೊಳಿಸುತ್ತಿದ್ದೇವೆ ಎಂದು ಕೋವಿಡ್ -19 ಕಣ್ಗಾವಲಿನ ಉಸ್ತುವಾರಿ, ಬಿಬಿಎಂಪಿಯ ವಿಶೇಷ ಆಯುಕ್ತ ಲೋಕೇಶ್ ಹೇಳಿದರು.
ನಾವು ಆರೋಗ್ಯ ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಅವರು ಪಾದರಾಯನಪುರದ ಪರಿಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಲು ಹಾಗೂ ಇದರಿಂದ ಕೋವಿಡ್ 19 ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹೇಳಿದರು. ಇನ್ನೊಂದೆಡೆ ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಪಾದರಾಯನಪುರಕ್ಕೆ ಭೇಟಿ ನೀಡಿ ಇಲ್ಲಿನ ಎಲ್ಲಾ ನಿವಾಸಿಗಳಿಗೂ ಕೊರೊನಾ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಸೋಂಕಿನ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದಾಗ ಅದು ಕೋವಿಡ್ 19 ಸಮುದಾಯ ಪ್ರಸರಣ ಅಂದರೆ, ವೈರಸ್ ಹರಡುವಿಕೆಯ ಮೂರನೇ ಹಂತವನ್ನು ಸೂಚಿಸುತ್ತದೆ. ಭಾರತದಲ್ಲಿ ಎಲ್ಲಿಯಾದರೂ ಸಮುದಾಯ ಪ್ರಸರಣ ಸಂಭವಿಸಿದೆಯೇ ಎಂದು ಕೇಳಿದ್ದಕ್ಕೆ, ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಕೆಲವು ಕ್ಲಸ್ಟರ್‌ಗಳಲ್ಲಿ ಸೋಂಕು ಕಂಡುಬಂದಿದ್ದು, ಮತ್ತು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ತೀರ ಹೆಚ್ಚಳವಾಗಿರುವುದನ್ನು ಗಮನಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Comments are closed.