ಕೋಲಾರ: ಜಿಲ್ಲೆಯ ಮುಳಬಾಗಲು, ಕೆಜಿಎಫ್ ಬಳಿಕ ಶುಕ್ರವಾರ ಜಿಲ್ಲಾ ಕೇಂದ್ರ ಕೋಲಾರದ ಗಾಂಧಿನಗರದ ವ್ಯಕ್ತಿಯಲ್ಲಿ (31) ಸೋಂಕು ಪತ್ತೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಲಾಕ್‌ಡೌನ್ ಸಡಿಲಿಕೆ ಬಳಿಕ ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಕೋಲಾರಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿರುವುದು ಪತ್ತೆಯಾಗಿದ್ದು, ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ ಮನೆಯಿಂದ 100 ಮೀಟರ್ ವ್ಯಾಪ್ತಿಯನ್ನು ನಗರಸಭೆಯಿಂದ ಶುಕ್ರವಾರ ಸೀಲ್‌ಡೌನ್ ಮಾಡಿದೆ.
ಲಾಕ್‌ಡೌನ್ ಘೋಷಣೆ ಬಳಿಕ ಸೋಂಕಿತ ವ್ಯಕ್ತಿ ಮಂಡ್ಯದ ಮಳವಳ್ಳಿಗೆ ಹೋಗಿದ್ದರು. ಸರಕಾರ ಲಾಕ್‌ಡೌನ್ ಸಡಿಲಿಕೆಗೊಳಿಸಿದ ಹಿನ್ನೆಲೆಯಲ್ಲಿ ಮೇ 11ರಂದು ಕೋಲಾರಕ್ಕೆ ಬಂದಿದ್ದರು. ಮೇ 12 ರಂದು ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದ ಅವರು, ಸ್ವಯಂ ಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು.
“ಮಂಡ್ಯದಿಂದ ಇತ್ತೀಚೆಗೆ ಕೋಲಾರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಅವರು ಬಾಡಿಗೆಗೆ ಇದ್ದ ಮನೆಯ 100 ಮೀಟರ್ ಸುತ್ತಳತೆಯ ಪ್ರದೇಶವನ್ನು ಕಂಟೇನ್ಮೆಂಟ್ ಮಾಡಲಾಗಿದೆ.”-ಸಿ.ಸತ್ಯಭಾಮ, ಜಿಲ್ಲಾಧಿಕಾರಿ
ಪರೀಕ್ಷಾ ವರದಿ ಶುಕ್ರವಾರ ಅಧಿಕಾರಿಗಳ ಕೈಸೇರಿದ್ದು, ಆ ವ್ಯಕ್ತಿಯಲ್ಲಿ ಕೊರೊನಾ ಸೋಂಕಿರುವುದು ದೃಢವಾಗಿದೆ. ವಿಷಯ ತಿಳಿದ ಕೂಡಲೇ ಆತನನ್ನು ಕ್ವಾರಂಟೈನ್‌ಗೊಳಿಸಲು ಅಧಿಕಾರಿಗಳು ಮುಂದಾಗಿದ್ದು, ಆ ವ್ಯಕ್ತಿ ಮನೆಯಲ್ಲಿಇಲ್ಲದಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿತ್ತು.
ಕೂಡಲೇ ಆತನನ್ನು ಅಧಿಕಾರಿಗಳು ಸಂಪರ್ಕಿಸಿದಾಗ ಬೆಂಗಳೂರಿನ ಬನಶಂಕರಿ ಬಳಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದು, ಬೆಂಗಳೂರಿಗೆ ಅಧಿಕಾರಿಗಳಿಗೆ ಸೋಂಕಿತನ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹೊರಗಿನಿಂದ ಬರುತ್ತಿದ್ದಾರೆ ಸೋಂಕಿತರು: ಜಿಲ್ಲೆಯಲ್ಲಿಈವರೆಗೆ ಒಟ್ಟು ಏಳು ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಹೊರರಾಜ್ಯ ಅಥವಾ ಹೊರ ಜಿಲ್ಲೆಯಿಂದ ಬಂದವರೇ ಆಗಿದ್ದಾರೆ. ಲಾಕ್‌ಡೌನ್ ಸಡಿಲಗೊಳಿಸಿದ ಬಳಿಕ ರಾಜ್ಯದ ನಾನಾ ಭಾಗಗಳಿಂದ ಜನರು ಜಿಲ್ಲೆಗೆ ಬರುತ್ತಿರುವುದು ಜಿಲ್ಲೆಯ ಜನರಲ್ಲಿಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಮನೆ ಮಾಡಿದೆ ಆತಂಕ: ನಾಲ್ಕು ದಿನಗಳಿಂದ ಹಿಂದೆ ನಗರಕ್ಕೆ ಬಂದಿದ್ದ ವ್ಯಕ್ತಿಯು ತಾನು ಕೆಲಸ ಮಾಡುವ ಕಚೇರಿ ಸೇರಿದಂತೆ ನಗರದ ನಾನಾ ಭಾಗಗಳಲ್ಲಿಸಂಚರಿಸಿರುವ ಅನುಮಾನವಿದೆ. ಆ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ನೆಟ್‌ವರ್ಕ್ ಆಧಾರದ ಮೇಲೆ ವ್ಯಕ್ತಿ ಎಲ್ಲೆಲ್ಲಿಸಂಚರಿಸಿದ್ದ ಎಂಬ ಮಾಹಿತಿ ಪಡೆಯಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಅಧಿಕಾರಿಗಳಿಗೆ ತಲೆಬಿಸಿ ತಂದ ಸೋಂಕಿತ: ಈಗಾಗಲೇ ಮುಳಬಾಗಲು ಹಾಗೂ ಕೆಜಿಎಫ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದವರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಕೋಲಾರದ ಸೋಂಕಿತ ಬೆಂಗಳೂರಿನಲ್ಲಿರುವುದರಿಂದ ಆತನೊಂದಿಗೆ ಯಾರು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪಡೆಯುವುದು ತಲೆನೋವಾಗಿ ಪರಿಗಣಿಸಿದೆ.
ನಗರಸಭೆಯಿಂದ 2 ನೇ ಅಡ್ಡರಸ್ತೆ ಸೀಲ್‌ಡೌನ್
ಕೊರೊನಾ ಸೊಂಕಿತರ ವಾಸಿಸುವ 100 ಮೀಟರ್ ವ್ಯಾಪ್ತಿಯ ಕಂಟೇನ್ಮೆಂಟ್‌ಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿನಗರಸಭೆ ಆಯುಕ್ತ ಶ್ರೀಕಾಂತ್, ಗಾಂಧಿನಗರ ವಾರ್ಡ್ ಸದಸ್ಯ ಪ್ರವೀಣ್ ಗೌಡ ನೇತೃತ್ವದಲ್ಲಿ ಗಾಂಧಿನಗರ ಎರಡನೇ ಅಡ್ಡರಸ್ತೆಯನ್ನು ಶುಕ್ರವಾರ ಸಂಜೆ ಕಂಟೇನ್ಮೆಂಟ್‌ಗೊಳಿಸಲಾಗಿದ್ದು, ಮುಂದಿನ 28 ದಿನಗಳ ಕಾಲ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ ಹಾಗೂ ಒಳಗೆ ಯಾರೂ ಹೋಗುವಂತಿಲ್ಲ.
Comments are closed.