ಬಾಗಲಕೋಟೆ (ಮೇ 26): 4 ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯೊಬ್ಬರು ವೇದಿಕೆಯಲ್ಲೇ ಸಿದ್ದರಾಮಯ್ಯನವರ ಕೆನ್ನೆಗೆ ಮುತ್ತಿಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಅದೇ ಫೋಟೋವನ್ನು ಬಳಸಿಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್ಬುಕ್ನಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದ ಬಾಗಲಕೋಟೆಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
2016ರಲ್ಲಿ ತರೀಕೆರೆ ತಾಲೂಕು ಪಂಚಾಯ್ತಿ ಸದಸ್ಯೆ ಗಿರಿಜಾ ಎಂಬುವವರು ವೇದಿಕೆಯಲ್ಲೇ ಸಿದ್ದರಾಮಯ್ಯನವರ ಕೆನ್ನೆಗೆ ಮುತ್ತು ನೀಡಿದ್ದರು. ಸಿದ್ದರಾಮಯ್ಯನವರ ಅಭಿಮಾನಿಯಾಗಿದ್ದ ನಾನು ರಾಜಕೀಯಕ್ಕೆ ಬರಲು ಅವರೇ ಸ್ಫೂರ್ತಿ. ಅವರನ್ನು ಹತ್ತಿರದಿಂದ ನೋಡಿ ಖುಷಿಯಾಗಿ ಮುತ್ತು ಕೊಟ್ಟೆ ಎಂದು ಆಕೆ ಸಮರ್ಥನೆಯನ್ನೂ ಮಾಡಿಕೊಂಡಿದ್ದರು. ಈ ಫೋಟೋ ಮತ್ತು ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು.
4 ವರ್ಷದ ಹಿಂದಿನ ಆ ಫೋಟೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದ ಸಿದ್ದರಾಮಯ್ಯನವರ ಸ್ವಕ್ಷೇತ್ರವಾದ ಬಾದಾಮಿಯ ಯುವಕನೊಬ್ಬ ಭಾರತದಲ್ಲಿ ಏಡ್ಸ್ ಬಂದಿದ್ದು ಇವರಿಂದಲೇ ಎಂದು ಅಸಭ್ಯವಾಗಿ ಪೋಸ್ಟ್ ಮಾಡಿದ್ದ. ಅಶ್ಲೀಲ ಬರಹ ಹಾಗೂ ಸಿದ್ದರಾಮಯ್ಯನವರಿಗೆ ಮಹಿಳೆ ಮುತ್ತಿಡುವ ಫೋಟೋ ಶೇರ್ ಮಾಡಿಕೊಂಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಾದಾಮಿಯ ಖ್ಯಾಡ ಗ್ರಾಮದ ಸಂಗಪ್ಪ ಸಿದ್ರಾಮಣ್ಣವರ ಎಂಬಾತ ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿರುವ ವ್ಯಕ್ತಿ. ಮಹಾತ್ಮ ಗಾಂಧಿ ಎನ್ನುವ ಫೇಸ್ಬುಕ್ ಪೇಜ್ನಲ್ಲಿನ ಪೋಸ್ಟ್ ಶೇರ್ ಮಾಡಿದ್ದ ಈ ಯುವಕನನ್ನು ಬಂಧಿಸಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.