ಬೆಂಗಳೂರು (ಮೇ 28); ರಾಜ್ಯದಲ್ಲಿ ಜೂನ್.01 ರಿಂದ ಲಾಕ್‌ಡೌನ್ 5.0 ಜಾರಿಯಾಗಲಿದೆ. ಆದರೆ, ಹಲವರ ಒತ್ತಾಯ ಮತ್ತು ಸಚಿವರ ಒಮ್ಮತ ಅಭಿಪ್ರಾಯದ ಮೇರೆಗೆ ಮುಂದಿನ ವಾರದಿಂದ ರಾಜ್ಯದಲ್ಲಿ ಹೋಟೆಲ್, ಜಿಮ್ ಹಾಗೂ ಎಲ್ಲಾ ಧರ್ಮದ ದೇವಾಲಯಗಳೂ ಓಪನ್ ಆಗಲಿವೆ ಎಂದು ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಲಾಕ್‌ಡೌನ್ 5.0 ಫ್ರೀ ಬಿಡುವ ಕುರಿತು ಚರ್ಚೆ ಮಾಡಲು ಇಂದು ಕ್ಯಾಬಿನೆಟ್ ಸಭೆ ಕರೆಯಲಾಗಿತ್ತು, ಈ ಸಭೆಯಲ್ಲಿ ಮುಖ್ಯಮಂತ್ರಿ ಎಲ್ಲಾ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದರು. ಈ ವೇಳೆ ಎಲ್ಲಾ ಸಚಿವರು ಹೋಟೆಲ್, ಜಿಮ್, ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ತೆರೆಯಲು ಒಮ್ಮತದ ಸಮ್ಮತಿ ನೀಡಿದ್ದಾರೆ.
ಸಭೆಯಲ್ಲಿ ಕೆಲವು ಸಚಿವರು ಮಾಲ್ ಗಳನ್ನು ತೆರೆಯುವ ಕುರಿತು ಸಹ ಮಾತನಾಡಿದ್ದರು. ಆದರೆ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ದಾಳಿ ಅಧಿಕವಾಗುತ್ತಿರುವುದರಿಂದ ಮೆಟ್ರೋ, ಮಾಲ್ ವಿಚಾರವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ಅನುಸರಿಸಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರಾತ್ರಿ 7ರ ನಂತರ ಕರ್ಫ್ಯೂ ವಿಚಾರವಾಗಿಯೂ ಹಲವು ಸಚಿವರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಕೆಲವರು ಕರ್ಫ್ಯೂ ಬೇಡ ಎಂದರೆ, ಕೆಲವರು ಇರಲಿ ಎಂದು ಅಭಿಪ್ರಾಯ ಮಂಡಿಸಿದ್ದಾರೆ. ಈ ನಡುವೆ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಸಣ್ಣ ಸಣ್ಣ ಸಮುದಾಯಗಳಿಗೂ ಸಹಾಯಧನ ನೀಡಬೇಕು ಎಂದು ಕೆಲವರು ಮನವಿ ಮಾಡಿದ್ದಾರೆ.
ಆದರೆ, ಈ ಕುರಿತು ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸರಿ ಇಲ್ಲ, ಇನ್ನು ಆ ಬಗ್ಗೆ ಚರ್ಚೆ ಬೇಡ” ಎಂದು ಸಚಿವರ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಇದಲ್ಲದೆ, “ಗುಜರಾತ್, ಮಹಾರಾಷ್ಟ್ರ ಹಾಗೂ ತಮಿಳುನಾಡು ಸೇರಿದಂತೆ ಈ ಮೂರು ರಾಜ್ಯಗಳ ವಿಮಾನ, ರಸ್ತೆ ಮತ್ತು ರೈಲು ಸಂಚಾರವನ್ನು ನಿರ್ಬಂಧಗೊಳಿಸುವ ಕುರಿತು ಸಹ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
Comments are closed.