ಕರ್ನಾಟಕ

ಲಾಕಡೌನ್: ಗೋದಾಮುಗಳಾಗಿ ಮಾರ್ಪಟ್ಟ ಕೋಳಿ ಸಾಕಾಣಿಕೆ ಕೇಂದ್ರಗಳು

Pinterest LinkedIn Tumblr


ಧಾರವಾಡ(ಮೇ.28): ಕೊರೋನಾ ಲಾಕಡೌನ್ ಪರಿಣಾಮ ಸಣ್ಣ ಕೈಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಸೇರಿದಂತೆ ಬಹುತೇಕ ಉದ್ಯಮಗಳು ನಷ್ಟದಲ್ಲಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಎಷ್ಟೋ ಜನರಿಗೆ ಗೊತ್ತಿಲ್ಲದ ವಿಚಾರವೇನೆಂದರೆ ಕೊರೋನಾ ಲಾಕ್‌ಡೌನ್​ಗೂ ಮೊದಲು ಕೊಳಿ ಸಾಕಾಣಿಕೆಗೆ ದೊಡ್ಡ‌ಪೆಟ್ಟು ನೀಡಿದ್ದು ಹಕ್ಕಿಜ್ವರ. ನಂತರ ಲಾಕ್‌ಡೌನ್​​ ಬಂದು ಇದ್ದ ಕೋಳಿಗಳು ಮಾರಾಟವಾಗದೆ ಲಕ್ಷಗಟ್ಟಲೇ ಉದ್ಯಮಿಗಳಿಗೆ ನಷ್ಟವಾಯ್ತು. ಹೀಗೆ ಲಾಕ್​ಡೌನ್​​ನಿಂದ ನಷ್ಟಕ್ಕೊಳಗಾದ ಕೋಳಿ ಸಾಕಾಣಿಕೆ ಉದ್ಯಮಿಗಳು ಇಂದಿಗೂ ಸುಧಾರಿಸಿಕೊಂಡಿಲ್ಲ. ಹಾಗಾಗಿಯೇ ಇಡೀ ರಾಜ್ಯದ ಎಲ್ಲಾ ಕಡೆಯೂ ಕೋಳಿ ಫಾರಂ ನೋಡಿದರೆ ಖಾಲಿ ಖಾಲಿ. ಆದ್ದರಿಂದ ಈಗ ಕೋಳಿ ಫಾರಂಗಳು ರೈತ ಬೆಳೆದ ಫಸಲು ಹಾಗೂ ಕೃಷಿ ಚಟುವಟಿಕೆಯ ಸಾಮಗ್ರಿ ಇಡುವ ಗೋದಾಮುಗಳಾಗಿ ಮಾರ್ಪಟ್ಟಿವೆ.

ಧಾರವಾಡ ಜಿಲ್ಲೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಕೋಳಿ ಫಾರಂಗಳಿವೆ. ಇದರಲ್ಲಿ ಶೇ.60ರಷ್ಟು ಕೋಳಿ ಫಾರಂಗಳು ಲಾಕ್‌ಡೌನ್ ಪರಿಣಾಮ ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಹೌದು, ಕೋಳಿ ಸಾಕಾಣಿಕೆ ನಡೆಯುತ್ತಿದ್ದ ಈ ಫಾರಂಗಳು ಇದೀಗ ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳ ದಾಸ್ತಾನು ಮಾಡುವ ಹಾಗೂ ಕೃಷಿ ಚಟುವಟಿಕೆಯ ಸಾಮಗ್ರಿಗಳನ್ನು ಇಡುವ ಗೋದಾಮು ಆಗಿವೆ. ಖಾಸಗಿ ಕಂಪನಿಗಳೊಂದಿಗೆ ಒಪ್ಪದ ಮಾಡಿಕೊಂಡಿದ್ದ ಕೋಳಿ ಫಾರಂಗಳ ಮಾಲೀಕರಿಗೆ ಲಾಕ್‌ಡೌನ್ ಸ್ಪಲ್ಪ ಹೊಡೆತಕೊಟ್ಟರೇ ಸ್ವಯಂ ಕೋಳಿ ಸಾಕಾಣಿಕೆ ಮಾಡಿದ್ದ ಮಾಲೀಕರಿಗೆ ಅಂತೂ ದೊಡ್ಡ ಹೊಡೆತ ಕೊಟ್ಟಿದೆ.

ಕೋಳಿ ಸಾಕಾಣಿಗೆ ಯಾಕೇ ಹಿಂದೇಟು?

ಮಾಂಸ ಮಾರಾಟ ಮಾಡುವ ಸುಗುಣಾ ಸೇರಿದಂತೆ ಕೆಲ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕೋಳಿ ಫಾರಂ ಮಾಲೀಕರು ಕೇವಲ ಅವುಗಳ ನಿರ್ವಹಣೆ ಮಾಡಿದರೆ ಸಾಕು. ಮರಿ ತಂದು ಕೊಡುವುದರ ಜೊತೆಗೆ ಅವುಗಳ ಆಹಾರ, ಔಷದೋಪಚಾರವನ್ನು ಆಯಾ ಕಂಪನಿಗಳು ನಿರ್ವಹಿಸುತ್ತವೆ. 45 ದಿನಗಳ ಬಳಿಕ ಉತ್ತಮ ಮಾಂಸದಡಿ ಬೆಳೆದು ನಿಂತ ಕೋಳಿಗಳನ್ನು ತೂಕ ಮಾಡಿ ತೆಗೆದುಕೊಂಡು ಹೋಗುವ ವಿವಿಧ ಕಂಪನಿಗಳು, ಕೋಳಿಯ ಮಾಂಸದ ಆಧಾರದಡಿ ಕೆಜಿಗೆ ಇಂತಿಷ್ಟು ಹಣ ಕೋಳಿ ಪಾರಂ ಮಾಲೀಕರಿಗೆ ನೀಡುತ್ತವೆ.

ಆದರೀಗ, ಲಾಡಕೌನ್​ ಅವಧಿಯಲ್ಲಿ ಬೆಳೆದು ನಿಂತಿದ್ದ ಕೋಳಿಗಳನ್ನು ಕಂಪನಿಗಳು ಸಹ ತೆಗೆದುಕೊಂಡು ಹೋಗಲು ಹಿಂದೇಟು ಹಾಕಿದ್ದವು. ಇದರಿಂದ 45 ದಿನಗಳ ಬಳಿಕ ಮತ್ತೆ ಕೋಳಿ ತೂಕದ ಇಳಿಕೆಯಾದ ಪರಿಣಾಮ ಮಾಲೀಕರಿಗೆ ನಷ್ಟ ಉಂಟಾಗಿತ್ತು. ಇನ್ನೂ ಕಂಪನಿಗಳ ಜೊತೆಗೆ ಒಪ್ಪದ ಇಲ್ಲದೇ ಸ್ವಯಂ ಕೋಳಿ ಸಾಕಾಣಿಕೆ ಮಾಡಿದ್ದ ಕೋಳಿ ಫಾರಂ ಮಾಲೀಕರು ಕೋಳಿಗೆ ಬೆಲೆ ಸಿಗದ ಕಾರಣ ಸಂಕಷ್ಟ ಅನುಭವಿಸವಂತೆ ಆಗಿತ್ತು. ಇದರಿಂದ ಸದ್ಯ ಕೋಳಿ ಸಾಕಾಣಿಕೆಗೆ ಹಿಂದೆಟು ಹಾಕುತ್ತಿದ್ದಾರೆ.

ಸದ್ಯ ಇದೀಗ ಲಾಕ್‌ಡೌನ್ ಸಡಲಿಕೆಯ ಪರಿಣಾಮ ಕೋಳಿಗೆ ಬೆಲೆಯೂ ಸಿಕ್ಕಿರುವ ಕಾರಣ ಕೋಳಿ ಪಾರಂ ಮತ್ತೆ ಬಾಗಿಲು ತೆರೆದು ಕೋಳಿ ಸಾಕಾಣಿಕೆಗೆ ಮುಂದಾದರೂ ಅವು ಗ್ರಾಹಕರ ಕೈ ಸಿಗಬೇಕಾದರೆ ಒಂದೂವರೆ ತಿಂಗಳಾದರೂ ಬೇಕು. ಆದರೆ ಲಾಕಡೌನ ಮುಗಿಯುವರೆಗೂ ಕೋಳಿ ಸಾಕಾಣಿಕೆಗೆ ಕೆಲ ಮಾಲೀಕರು ಹಿಂದೇಟು ಹಾಕಿದ್ದರೆ ಕೆಲ ಮಾಲೀಕರು ಮುಂದಾಗಿದ್ದರೂ ಸಹ ಕೋಳಿ ಮಾಂಸದ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ.ಇನ್ನು ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಅವಳಿ ನಗರದ ಮಾಂಸಾಹಾರ ಅಂಗಡಿಗಳು ಬಾಗಿಲು ತೆರೆದಿದ್ದು, ಪಾರ್ಸಲ್ ಸೇವೆ ಆರಂಭಿಸಿವೆ. ಇದರ ಜೊತೆಗೆ ಗ್ರಾಮೀಣ ಭಾಗದ ಕೆಲ ಡಾಬಾಗಳು ಸಹ ಪಾರ್ಸಲ್ ಸೇವೆ ಆರಂಭಿಸಿರುವ ಕಾರಣ ಪಾತಾಳಕ್ಕೆ ಕುಸಿದಿದ್ದ ಕೋಳಿ ಮಾಂಸಕ್ಕೆ ಬೇಡಿಕೆ ಬಂದಿದೆ. ಆದರೆ ಕೋಳಿ ಫಾರಂಗಳಲ್ಲಿ ಕೋಳಿಗಳೇ ಇಲ್ಲದಿರುವ ಕಾರಣ ಕೋಳಿಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿದ್ದು, ಇದರಿಂದ 1 ಕೆ.ಜಿ. ಕೋಳಿ ಮಾಂಸ 300 ರೂ.ಗೆ ಮಾರಾಟ ಮಾಡಲಾಗ್ತಿದೆ.

Comments are closed.