ಬೆಂಗಳೂರು(ಮೇ.30): ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಕೊರೋನಾ ಸೋಂಕಿಗೆ ಒಳಗಾದ ಮೊದಲ ಕಾರ್ಪೊರೇಟರ್ ಒಬ್ಬರ ಕಥೆ ಇದು. ಕೊರೋರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಕಾರ್ಪೋರೇಟರ್ ಪ್ರತಿನಿಧಿಸುತ್ತಿದ್ದ ಇಡೀ ವಾರ್ಡ್ ಈಗ ಆತಂಕದಲ್ಲಿದೆ. ಅವರ ಜೊತೆ ಸಂಪರ್ಕದಲ್ಲಿರುವ ಬೆಂಬಲಿಗರು, ಲಾಕ್ಡೌನ್ ಸಂದರ್ಭದಲ್ಲಿ ಇವರಿಂದ ಪ್ರಯೋಜನ ಪಡೆದವರಿಗೆಲ್ಲಾ ಇದೀಗ ಕೊರೋನಾ ಭಯ ಶುರುವಾಗಿದೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಜೆಡಿಎಸ್ ಕಾರ್ಪೊರೇಟರ್ ಗೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನುವುದು ದೃಢೀಕೃತ ಆಗುತ್ತಿದ್ದಂತೆ ಇಡೀ ವಾರ್ಡ್ಗೆ ವಾರ್ಡೇ ಬೆಚ್ಚಿಬಿದ್ದಿದೆ. ಅವರ ಜೊತೆ ಸಂಪರ್ಕದಲ್ಲಿದ್ದ ಬೆಂಬಲಿಗರು ಹಾಗೂ ವಾರ್ಡ್ನ ಜನರಲ್ಲಿ ಆತಂಕ ಮನೆಮಾಡಿದೆ. ತಮಗೂ ಕೊರೋನಾ ಸೋಂಕು ಇರಬಹುದಾ ಎಂದು ಜನ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ತಿದಾರೆ.
ಲಾಕ್ಡೌನ್ ಸಂದರ್ಭದಲ್ಲಿ ತನ್ನ ವಾರ್ಡ್ ಸೀಲ್ ಡೌನ್ ಆಗಿದ್ದರೂ ಕೂಡ ಜನರ ಜೊತೆಗೆ ತೀವ್ರ ಒಡನಾಟ ಇಟ್ಟುಕೊಂಡಿದ್ದ ಕಾರ್ಪೊರೇಟರ್ ಮನೆಮನೆಗಳಿಗೂ ತೆರಳಿ ಸಾಂತ್ವನ ಹೇಳುವ ಕೆಲಸವನ್ನು ಮಾಡಿದ್ದರು. ಹಾಗೆಯೇ ಹಬ್ಬದ ಹೊಸ್ತಿಲಲ್ಲಿ ದಿನಸಿಯನ್ನು ಕೂಡ ವಿತರಿಸಿದ್ದರು. ವಾರ್ಡ್ ಸೀಲ್ಡೌನ್ ಆಗಿರುವುದರಿಂದ ಆಗುತ್ತಿರುವಂತ ಸಮಸ್ಯೆಗಳ ಕುರಿತಾಗಿ ಹೋರಾಟವನ್ನು ಕೂಡ ಅವರು ಮಾಡಿದ್ದರೆನ್ನುವುದು ಇಲ್ಲಿ ಗಮನಾರ್ಹ.
ಆದರೆ ಅವರಿಗೇನೇ ಈಗ ಕೊರೋನಾ ಪಾಸಿಟಿವ್ ಬಂದಿರುವುದರಿಂದಾಗಿ ಅವರ ಜೊತೆ ನಿಕಟ ಸಂಪರ್ಕದಲ್ಲಿದ್ದ ಜನರಿಗೆಲ್ಲಾ ಢವ ಢವ ಶುರುವಾಗಿದೆ. ಕಾರ್ಪೊರೇಟರ್ ವಾಸವಾಗಿರುವ ಮನೆಯಲ್ಲೇ ಸರಿಸುಮಾರು ಇಪ್ಪತ್ತೈದು ಮಂದಿ ಜೀವನ ನಡೆಸುತ್ತಿದ್ದಾರೆ. ಅವರೆಲ್ಲರನ್ನು ಕೂಡ ಈಗಾಗಲೇ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಆದರೀಗ ಆತಂಕ ಇರುವುದು ಅವರ ಜತೆ ನಾನಾ ಸಂದರ್ಭಗಳಲ್ಲಿ ಜೊತೆಗಿದ್ದು ಓಡಾಡಿದ ಕಾರ್ಯಕರ್ತರಿಗೆ. ಅವರೆಲ್ಲರೂ ತಮಗೆಲ್ಲಿ ಕೊರೋನಾ ಬರುತ್ತದೆ ಎನ್ನುವ ಆತಂಕಕ್ಕೆ ಸಿಲುಕಿದ್ದಾರೆ.
ವಾರ್ಡ್ಗೆ ವಾರ್ಡೇ ಕ್ವಾರಂಟೈನ್ ಗೆ ಒಳಗಾಗುತ್ತಾ…? ಇಂಥದೊಂದು ಅನುಮಾನ ಕಾಡುತ್ತಿರುವುದಂತೂ ನಿಜ. ಏಕೆಂದರೆ ಜೆಡಿಎಸ್ ಕಾರ್ಪೋರೇಟರ್ ಜನರ ಜತೆಗೆ ತೀವ್ರ ಒಡನಾಟ ಇಟ್ಟುಕೊಂಡಿದ್ದವರು. ಬೇರೆಲ್ಲಾ ಕಾರ್ಪೊರೇಟರ್ಗಳ ಹೋಲಿಕೆಯಲ್ಲಿ ವಾರ್ಡ್ ಸೀಲ್ ಡೌನ್ ಆದ್ರೂ ಮನೆಯಲ್ಲಿ ಕೂರದೆ ಜನರೊಂದಿಗೆ ಇದ್ದು ಅವರ ಅವಶ್ಯಕತೆ ಪೂರೈಸಿದ್ದರು.
ತನ್ನ ವಾರ್ಡ್ನಲ್ಲಿ ಕೊರೋನಾ ಸೋಂಕಿತರು ಇದ್ದಾರೆ ಎನ್ನುವ ಸತ್ಯ ಗೊತ್ತಿದ್ದ ಹೊರತಾಗ್ಯೂ ಜನರ ನಡುವೆ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದಲೇ ತನಗೆ ಕೊರೋನ ಸೋಂಕು ಹರಡಿದೆ ಎನ್ನುವ ಬೇಸರದ ಭಾವನೆಯನ್ನು ಕೂಡ ಕಾರ್ಪೋರೇಟರ್ ಹಂಚಿಕೊಂಡಿದ್ದಾರೆ.ಇವರೆಲ್ಲ ಕ್ವಾರಂಟೈನ್ ಗೆ ಒಳಪಡಬಹುದಾ…?
ಕಾರ್ಪೊರೇಟರ್ ಗೆ ಕೊರೋನಾ ಪಾಸಿಟಿವ್ ದೃಢಪಡ್ತಿದ್ದಂಗೆ ಸೃಷ್ಟಿಯಾಗಿರುವ ಬಹುದೊಡ್ಡ ಪ್ರಶ್ನೆ ಇದು. ಯಾರಿಗೆಲ್ಲಾ ಕೊರೋನಾ ಸೋಂಕು ತಗಲಬಹುದು. ಯಾರೆಲ್ಲಾ ಇವರ ಸಂಪರ್ಕಕ್ಕೆ ಬಂದಿರಬಹುದು ಎನ್ನುವ ಕುತೂಹಲ ಮೂಡಿದೆ. ಒಂದು ಮೂಲದ ಪ್ರಕಾರ ಇವರ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದ್ದು 250 ಕ್ಕೂ ಹೆಚ್ಚು ಜನ ಕ್ವಾರಂಟೈನ್ ಗೆ ಒಳಪಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾರ್ಪೊರೇಟರ್ ಜೊತೆ ಸಂಪರ್ಕದಲ್ಲಿರುವ ಕಾರ್ಪೊರೇಟರ್ ತಂದೆಯಿಂದಲೂ ಆತಂಕ ಶುರುವಾಗಿದೆ. ಹಾಗೆಯೇ ಬಿಬಿಎಂಪಿ ಅಧಿಕಾರಿಗಳು. ಶಾಸಕರು ಕೂಡ ಕ್ವಾರಂಟೈನ್ಗೆ ಒಳಗಾಗಲಿದ್ದಾರಾ ಎನ್ನೋ ಪ್ರಶ್ನೆ ಮೂಡಿದೆ.ಏಕೆಂದ್ರೆ ಮೊನ್ನೆ ನಡೆದ ಸಭೆಯಲ್ಲಿ ಕಾರ್ಪೊರೇಟರ್ ತಂದೆ, ಸೀಲ್ ಡೌನ್ ತೆರವು ವಿಚಾರದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಗನ ಬದಲಿಗೆ ಭಾಗವಹಿಸಿದ್ದರು.
ಜ್ವರದ ಕಾರಣವೇಳಿ ಸಭೆಗೆ ಗೈರಾಗಿದ್ದ ಕಾರ್ಪೊರೇಟರ್ ಗೆ ಆಗಲೇ ಶಾಸಕರು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ರಂತೆ. ಕಾರ್ಪೊರೇಟರ್ ತಂದೆ ಹಾಜರಾಗಿದ್ದ ಆ ಸಭೆಯ ನೇತೃತ್ವವನ್ನು ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್, ಶಾಸಕ ಜಮೀರ್ ಅಹಮದ್ ವಹಿಸಿದ್ರು.
ತಂದೆ ಪ್ರಾಥಮಿಕ ಸಂಪರ್ಕಿತರಾದ್ರೆ ಅವರ ಜೊತೆ ಪಾಲ್ಗೊಂಡಿದ್ದವರೆಲ್ಲಾ ದ್ವಿತೀಯ ಸಂಪರ್ಕಿತರಾಗಲಿದ್ದಾರೆ. ಹಾಗೆಯೇ ಬಿಬಿಎಂಪಿ ಇಬ್ಬರು ವಿಶೇಷ ಆಯುಕ್ತರು ಕೂಡ ಪ್ರಾಥಮಿಕ ಸಂಪರ್ಕಿತರಾಗಿ ಕ್ವಾರಂಟೈನ್ಗೆ ಒಳಪಡಲಿದ್ದಾರೆ. ಬಿಬಿಎಂಪಿ ಮೇಯರ್ ಗೌತಮ್ ಹಾಗೂ ಕಮಿಷನರ್ ಅನಿಲ್ ಕುಮಾರ್ ಕೂಡ ಕ್ವಾರಂಟೈನ್ ಗೆ ಒಳಪಟ್ಟರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಕಾರ್ಪೊರೇಟರ್ ಗೆ ಕೊರೋನಾ ಬಂದಿರುವುದೇ ಇದೇ ಮೊದಲ ಬಾರಿಗೆ ವಾರ್ಡ್ ಗೆ ವಾರ್ಡೇ ಕ್ವಾರಂಟೈನ್ ಆಗುವ ಆತಂಕ ನಿರ್ಮಾಣವಾಗಿರುವುದಂತೂ ಸತ್ಯ.
Comments are closed.