ಕರ್ನಾಟಕ

ಬೇರೆಯವರ ಮೊಬೈಲ್‌ ಸಂಖ್ಯೆ ನೀಡಿ ಕ್ವಾರಂಟೈನ್‌ ಸೆಂಟರ್‌ನಿಂದ ಶಂಕಿತರ ಪರಾರಿ..!

Pinterest LinkedIn Tumblr


ರಾಯಚೂರು: ಕೊರೊನಾ ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಸ್ಥಾಪಿಸಿದ್ದ ಕ್ವಾರಂಟೈನ್‌ ಕೇಂದ್ರಗಳಿಂದ ಮೂವರು ತಪ್ಪಿಸಿಕೊಂಡು ಮತ್ತೆ ಪೊಲೀಸರ ವಶಕ್ಕೆ ಸಿಕ್ಕುಬಿದ್ದಿದ್ದಾರೆ. ಇದರ ಬೆನ್ನಲ್ಲೇ ಕ್ವಾರಂಟೈನ್‌ನಲ್ಲಿ ಇರುವವರು ತಮ್ಮದಲ್ಲದ ಮೊಬೈಲ್‌ ನಂಬರ್‌ ನೀಡಿದ್ದು ಹೊಸ ತಲೆನೋವು ತಂದಿದೆ.

ಕ್ವಾರಂಟೈನ್‌ ಕೇಂದ್ರಗಳಲ್ಲಿ ಮೂಲ ಸೌಲಭ್ಯದ ಕೊರತೆ, ಅವ್ಯವಸ್ಥೆ ಜತೆಗೆ ಸೋಂಕಿತರು ಅಲ್ಲೇ ಪತ್ತೆಯಾಗಿದ್ದರಿಂದ ಗೊಂದಲ ಉಂಟಾಗಿತ್ತು. ಇದೀಗ ಕ್ವಾರಂಟೈನ್‌ ಕೇಂದ್ರದಲ್ಲಿರುವವರು ಪರಾರಿಯಾಗಿರುವ ಅನುಮಾನ ಆಡಳಿತಕ್ಕೆ ಸಮಸ್ಯೆ ಉಂಟು ಮಾಡಿದೆ.

ಕ್ವಾರಂಟೈನ್‌ ಗೊಂದಲ: ಜಿಲ್ಲೆಯಲ್ಲಿ ಮಹಾರಾಷ್ಟ್ರ ಮತ್ತಿತರೆ ರಾಜ್ಯಗಳಿಂದ ಲಾಕ್‌ ಡೌನ್‌ ವೇಳೆ ವಾಪಸಾದ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತಿತರರನ್ನು ಇರಿಸಲು ಜಿಲ್ಲಾಡಳಿತ 100ಕ್ಕೂ ಅಧಿಕ ಕ್ವಾರಂಟೈನ್‌ ಕೇಂದ್ರ ಸ್ಥಾಪಿಸಿತ್ತು. ಆಯಾ ತಾಲೂಕುಗಳಿಗೆ ಸೇರಿದವರನ್ನು ಆ ತಾಲೂಕಿನಲ್ಲೇ ಕ್ವಾರಂಟೈನ್‌ ಮಾಡಲಾಗಿತ್ತು.

ಹೀಗೆ ಕ್ವಾರಂಟೈನ್‌ ಮಾಡು ವೇಳೆ ಆಯಾ ಕಾರ್ಮಿಕರ ಸಂಪೂರ್ಣ ಮಾಹಿತಿ ಪಡೆಯಲಾಗಿತ್ತು. ಮೊಬೈಲ್‌ ಸಂಖ್ಯೆ, ವಿಳಾಸ, ಕುಟುಂಬದ ವಿವರ ಪಡೆದು ಸಂಗ್ರಹಿಸಲಾಗಿತ್ತು. ಕ್ವಾರಂಟೈನ್‌ ಕೇಂದ್ರದಲ್ಲಿರುವವರಲ್ಲಿಯೇ ಕೊರೊನಾ ಸೋಂಕು ಪತ್ತೆಯಾದ ನಂತರದಲ್ಲಂತೂ ಅಲ್ಲಿರುವವರಿಗೆ ಭೀತಿ ಹೆಚ್ಚಾಗಿತ್ತು. ಕೇಂದ್ರದಲ್ಲಿಯೇ ಸೋಂಕು ಹರಡುವ ಆತಂಕದ ಮಾತು ವ್ಯಕ್ತವಾಗಿದ್ದವು. ಕ್ವಾರಂಟೈನ್‌ ಕೇಂದ್ರದಲ್ಲಿದ್ದವರ ಗಂಟಲಿನ ದ್ರವದ ಮಾದರಿಯ ವರದಿ ಬರುವುದು ತಡವಾಗಿದ್ದರಿಂದ ಬಿಡುಗಡೆಯೂ ಬಹಳ ವಿಳಂಬವಾಗಿತ್ತು. ಇದರಿಂದ ತೀವ್ರ ಬೇಸರಗೊಂಡ ಮೂವರು ವ್ಯಕ್ತಿಗಳು, ಮಸ್ಕಿಯ ಕ್ವಾರಂಟೈನ್‌ ಕೇಂದ್ರದಿಂದ ಜೂನ್ 3ರಂದು ಪರಾರಿಯಾಗಿದ್ದರು. ಪರಾರಿಯಾದವರ ವಿರುದ್ಧ ಪೊಲೀಸರು ಕೇಸ್‌ ದಾಖಲಿಸಿದ್ದರು. ಆನಂತರದಲ್ಲಿ ಪರಾರಿಯಾದವರನ್ನು ಹುಡುಕಿ ಮತ್ತೆ ವಾಪಸ್‌ ಕರೆ ತಂದಿದ್ದೂ ಆಗಿದೆ.

ಅನ್ಯರ ಮೊಬೈಲ್‌: ಕ್ವಾರಂಟೈನ್‌ ಕೇಂದ್ರದಲ್ಲಿರುವವರ ಪತ್ತೆಗೆ ಆರಂಭದಲ್ಲಿಯೇ ಜಿಲ್ಲಾಡಳಿತ ಸಂಪೂರ್ಣ ಮಾಹಿತಿ ಕಲೆ ಹಾಕಿತ್ತು. ಆದರೆ ಆ ವೇಳೆ ಸುಮಾರು 206 ಜನ ತಮ್ಮದಲ್ಲದ ಮೊಬೈಲ್‌ ನಂಬರ್‌ನೀಡಿರುವುದು ಇದೀಗ ಬೆಳಕಿಗೆ ಬಂದಿದೆ. ಕೋವಿಡ್‌ ಬಗ್ಗೆ ನಿಗಾವಹಿಸಲು ಸ್ಥಾಪಿಸಿರುವ ರಾಜ್ಯ ಕೋವಿಡ್‌ ವಾರ್‌ ರೂಮ್‌ ಗುರುವಾರ ಜಿಲ್ಲಾ ಪೊಲೀಸರಿಗೆ ಕರೆ ಮಾಡಿ 206 ಜನ ಕ್ವಾರಂಟೈನ್‌ ಕೇಂದ್ರದಿಂದ ತಪ್ಪಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದೆ. ಕೂಡಲೇ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಹುಡುಕಾಟಕ್ಕೆ ಮುಂದಾಗಿದ್ದಾರೆ. ಶೋಧ ಕಾರ್ಯಕ್ಕೆ ಮುಂದಾದಾಗ ಕೆಲವರು ಕ್ವಾರಂಟೈನ್‌ ಕೇಂದ್ರದಲ್ಲಿದ್ದರೆ ಮತ್ತೆ ಕೆಲವರು ತಮ್ಮ ಸಂಬಂಧಿಕರ ಮೊಬೈಲ್‌ ನಂಬರ್ ‌ನೀಡಿರುವುದು ಗೊತ್ತಾಗಿದೆ. ಕ್ವಾರಂಟೈನ್‌ನಲ್ಲಿರುವವರು ನೈಜ ಮಾಹಿತಿ ನೀಡಿಲ್ಲ ಎಂಬುದು ಪತ್ತೆಯಾಗಿದೆ. ಇದು ಕ್ವಾರಂಟೈನ್‌ನಲ್ಲಿರುವವರು ಬಿಡುಗಡೆಗೊಂಡ ನಂತರದಲ್ಲಿ ನಿಗಾ ಇರಿಸಲು ಸವಾಲಾಗುವುದರಲ್ಲಿ ಸಂಶಯವಿಲ್ಲ.

ರಾಜ್ಯ ಕೋವಿಡ್‌ ವಾರ್ ‌ರೂಮ್‌ ನಿಂದ 206 ಜನ ತಪ್ಪಿಸಿಕೊಂಡಿದ್ದಾರೆಂಬ ಮಾಹಿತಿ ಬಂದಿತ್ತು. ಹುಡುಕಾಟ ನಡೆಸಿದಾಗ ಎಲ್ಲರೂ ಕ್ವಾರಂಟೈನ್‌ ಕೇಂದ್ರದಲ್ಲೇ ಇರುವುದು ಗೊತ್ತಾಗಿದೆ. ಹಾಗೊಂದು ವೇಳೆ ಯಾರಾದರೂ ತಪ್ಪಿಸಿಕೊಂಡರೆ ಅಂಥವರ ವಿರುದ್ಧ ಕೇಸ್‌ ದಾಖಲಿಸಲಾಗುವುದು ಎಂದು ರಾಯಚೂರು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ಧಾರೆ.

Comments are closed.