ಬೆಂಗಳೂರು(ಜೂ.04): ಕರ್ನಾಟಕದಲ್ಲಿ ಮಾರಕ ಕೋವಿಡ್-19 ವೈರಸ್ ಮರಣ ಮೃದಂಗ ಮುಂದುವರಿದಿದೆ. ಇಂದು ಒಂದೇ ದಿನದಲ್ಲಿ ಈ ಕೊರೋನಾ ವೈರಸ್ ಅಟ್ಟಹಾಸಕ್ಕೆ ನಾಲ್ವರು ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ 2, ದಾವಣಗೆರೆ ಮತ್ತು ಗದಗದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರದ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಯಲ್ಲಿ 257 ಮಂದಿಯಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4320ಕ್ಕೆ ಏರಿಕೆಯಾಗಿದೆ. ಸತತ ಮೂರು ದಿನಗಳಿಂದ ಪ್ರತಿನಿತ್ಯ ಕೊರೋನಾ ಪಾಸಿಟಿವ್ ಕೇಸುಗಳು ದ್ವಿಶತಕ ಬಾರಿಸುತ್ತಿವೆ. ಹೀಗಾಗಿ ಜನರಲ್ಲಿ ಕೋವಿಡ್-19 ಭೀತಿ ಮತ್ತಷ್ಟು ಹೆಚ್ಚಾಗಿದೆ.
ಇನ್ನು, ಉಡುಪಿ 92, ರಾಯಚೂರು, 88 ಬೆಂಗಳೂರು 9 ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 257 ಕೇಸ್ ದಾಖಲಾಗಿದೆ. ರಾಜ್ಯದ ಒಟ್ಟು 4320 ಸೋಂಕಿತರ ಪೈಕಿ 1610 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನಳಿದವರಿಗೆ ಪ್ರತ್ಯೇಕವಾಗಿ ಕೋವಿಡ್-19 ಚಿಕಿತ್ಸೆ ನೀಡಲಾಗುತ್ತಿದೆ.
ದೇಶದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ ವಾರ ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಮೇ 30 ರಿಂದ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಬುಧವಾರ ಒಂದೇ ದಿನ ದೇಶದಲ್ಲಿ 9,304 ಪ್ರಕರಣಗಳು ಕಂಡುಬಂದಿವೆ. ಇದರಿಂದ ಭಾರತದ ಕೊರೋನಾ ವೈರಸ್ ಪೀಡಿತರ ಸಂಖ್ಯೆ 2,16,919ಕ್ಕೆ ಏರಿಕೆಯಾಗಿದೆ.
Comments are closed.