ಬೀದರ: ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿಯಾಗಿದೆ.
ಇನ್ನೊಂದೆಡೆ ಮಹಾರಾಷ್ಟ್ರ ಕಂಟಕದಿಂದ ಕೋವಿಡ್ ಸೋಂಕಿತರ ಸಂಖ್ಯೆ ಇದೀಗ ಜಿಲ್ಲೆಯಲ್ಲಿ ಇನ್ನೂರರ ಗಡಿ ದಾಟಿದೆ.
ಕಳೆದೆರಡು ದಿನದಿಂದ ತಗ್ಗಿದ್ದ ಪಾಸಿಟಿವ್ ಪ್ರಕರಣಗಳು ಶುಕ್ರವಾರ ಮತ್ತೆ ಹೆಚ್ಚಾಗಿದ್ದು, ಒಂದೇ ದಿನ ದಾಖಲೆಯ 39 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 214ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ಹೇಲ್ತ್ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರಲಿಲ್ಲ.
ಆದರೆ, ಇಂದು ಒಂದೇ ದಿನದಲ್ಲಿ ಅತೀ ಹೆಚ್ಚಿನ ಅಂದರೆ, 39 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಒಂದು ಕಂಟೈನ್ಮೆಂಟ್ ಝೋನ್ ಕೇಸ್ ಹೊರತುಪಡಿಸಿದರೆ ಉಳಿದ ಎಲ್ಲ 38 ಸೋಂಕು ಪ್ರಕರಣಗಳಿಗೆ ಮಹಾರಾಷ್ಟ್ರದ ಸಂಪರ್ಕವೇ ಕಾರಣವಾಗಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಮೇ 17ರಂದು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಗವಾನ್ ಚೌಕ್ ನ (ಓಲ್ಡ್ ಸಿಟಿ) 59 ವರ್ಷದ ಮಹಿಳೆ (ಪಿ-19850), ಮೇ 23ರಂದು ಸಾವನ್ನಪ್ಪಿದ್ದು, ಶುಕ್ರವಾರ ಸಿಕ್ಕಿರುವ ಈಕೆಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.
ದಿನ ಕಳೆದಂತೆ ‘ಮಹಾ’ನಂಟಿನಿಂದ ಜಿಲ್ಲೆಗೆ ಹೆಚ್ಚಿನ ಹಾನಿಯಾಗುತ್ತಿದ್ದು, ಮುಖ್ಯವಾಗಿ ಈ ಸೋಂಕು ಗ್ರಾಮೀಣ ಭಾಗದ ಹಳ್ಳಿ ಹಳ್ಳಿಗಳಿಗೆ ವ್ಯಾಪಿಸುತ್ತಿರುವುದು ಆತಂಕವನ್ನುಂಟು ಮಾಡಿದೆ.
ಮುಂಬೈ, ಪುಣೆಯಿಂದ ಬಂದವರು ಕ್ವಾರಂಟೈನ್ ಅವಧಿ ಮುಗಿದರೂ ಸ್ಯಾಂಪಲ್ ಪರೀಕ್ಷಾ ವರದಿ ಕೈ ಸೇರುತ್ತಿಲ್ಲ. ಹಾಗಾಗಿ ಕೇಂದ್ರದ ತಮ್ಮ ತಮ್ಮ ಮನೆಗೆ ತೆರಳಿ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಆದರೆ, ನಂತರದ ಫಲಿತಾಂಶದಲ್ಲಿ ಪಾಸಿಟಿವ್ ಬರುತ್ತಿರುವುದು ಸೋಂಕು ವ್ಯಾಪಿಸಲು ಮೂಲ ಕಾರಣ ಎನ್ನಲಾಗುತ್ತಿದೆ.
ಹೊಸ ಸೋಂಕಿತ 39 ಮಂದಿಯಲ್ಲಿ 5 ಜನ ಬಾಲಕರು ಸೇರಿದ್ದಾರೆ. 28 ಜನ ಗಂಡು, 11 ಮಹಿಳೆಯರು ಇದ್ದಾರೆ. ಔರಾದ ತಾಲೂಕಿನಲ್ಲಿ ಅತಿ ಹೆಚ್ಚಿನ 12 ಪ್ರಕರಣಗಳು ಪತ್ತೆಯಾಗಿವೆ.
ಎಕಂಬಾ, ಗಂಗನಬೀಡ್, ಹುಲ್ಯಾಳ್ ಭಾಗಗಳಲ್ಲಿ ತಲಾ 3, ಚಿಕ್ಲಿ (ಯು), ಕರಕ್ಯಾಳ್, ಜಮಾಲಪೂರ ತಲಾ 1, ಬಸವ ಕಲ್ಯಾಣ ತಾಲೂಕಿನ ಚಿಟ್ಟಾ (ಕೆ) ತಾಂಡಾದಲ್ಲಿ 9, ಕಲಕೇರಾದಲ್ಲಿ 2 ಸೇರಿ ಒಟ್ಟು 11, ಭಾಲ್ಕಿ ತಾಲೂಕಿನ ನಾಗರಾಳ ಮತ್ತು ರುದನೂರ ಗ್ರಾಮದಲ್ಲಿ ತಲಾ 2, ಜನತಾ ಹೌಸ್ ನಲ್ಲಿ 1 ಸೇರಿ ಒಟ್ಟು 5 ಪ್ರಕರಣಗಳು, ಕಮಲ ನಗರ ತಾಲೂಕಿನ ಚಿಮ್ಮೇಗಾಂವ, ಬೆಳಕುಣಿ (ಬಿ) ಗಳಲ್ಲಿ ತಲಾ 2, ತೋರಣಾ 1 ಸೇರಿ ಒಟ್ಟು 5 ಹಾಗೂ ಹುಮನಾಬಾದ ತಾಲೂಕಿನ ಹುಮನಾಬಾದ ಪಟ್ಟಣದಲ್ಲಿ 2, ಹಿಲಾಲಪೂರ, ದುಬಲಗುಂಡಿ ಮತ್ತು ಕಲ್ಲೂರ ರಸ್ತೆ ತಲಾ 1 ಸೇರಿ ಒಟ್ಟು 5 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಈಗ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 214 ಆಗಿದೆ. ಇದುವರೆಗೆ ಈ ಸೋಂಕಿಗೆ ಒಟ್ಟು 6 ಜನ ಸಾವನ್ನಪ್ಪಿದ್ದಾರೆ ಹಾಗೂ 41 ಮಂದಿ ಡಿಸ್ಚಾರ್ಜ್ ಆಗಿದ್ದು, ಇನ್ನೂ 168 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.
Comments are closed.