ಕರ್ನಾಟಕ

ಕನಕಪುರ ರಸ್ತೆಯ ನೆಲಗುಳಿಯಲ್ಲಿ ಸಹೋದರ ಧ್ರುವ ಸರ್ಜಾರ ಫಾರ್ಮ್‌ ಹೌಸ್‌ನಲ್ಲಿ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ

Pinterest LinkedIn Tumblr

ಹೃದಯಾಘಾತಕ್ಕೆ ಒಳಗಾಗಿ ಭಾನುವಾರ (ಜೂ.7) ಕೊನೆಯುಸಿರೆಳೆದ ನಟ ಚಿರಂಜೀವಿ ಸರ್ಜಾ ಅವರಿಗೆ ಸೋಮವಾರ ಅಂತಿಮ ವಿದಾಯ ಸಲ್ಲಿಸಲಾಯಿತು. ಕನಕಪುರ ರಸ್ತೆಯ ನೆಲಗುಳಿ ಗ್ರಾಮದಲ್ಲಿ ಇರುವ ತಮ್ಮ ಫಾರ್ಮ್‌ ಹೌಸ್‌ನಲ್ಲಿಯೇ ಸಹೋದರನ ಅಂತ್ಯಕ್ರಿಯೆ ಮಾಡಬೇಕು ಎಂದು ಧ್ರುವ ಸರ್ಜಾ ಹಂಬಲಿಸಿದ್ದರು. ಅದಕ್ಕೆ ಕುಟುಂಬದ ಎಲ್ಲ ಸದಸ್ಯರೂ ಸಮ್ಮತಿ ಸೂಚಿಸಿದರು.

ಸೋಮವಾರ ಬೆಳಗ್ಗೆ 6.30ರಿಂದ ಮಧ್ಯಾಹ್ನ 2 ಗಂಟೆವರೆಗೂ ಬಸವನಗುಡಿಯ ನಿವಾಸದಲ್ಲಿ ಚಿರು ಪಾರ್ಥಿವ ಶರೀರವನ್ನು ಅಭಿಮಾನಿಗಳ ದರ್ಶನಕ್ಕಾಗಿ ಇರಿಸಲಾಗಿತ್ತು. ನಂತರ ಅವರನ್ನು ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ‘ಬೃಂದಾವನ’ ಫಾರ್ಮ್‌ ಹೌಸ್‌ಗೆ ತರಲಾಯಿತು. 3.30ರ ಸಮಯಕ್ಕೆ ಪೂಜಾ ವಿಧಿನಿಧಾನಗಳನ್ನು ಆರಂಭಿಸಲಾಯಿತು. ಗೌಡ ಸಂಪ್ರದಾಯದ ಅನುಸಾರ ಅಂತ್ಯ ಸಂಸ್ಕಾರ ಮಾಡಲಾಯಿತು.

ಮೇಘನಾ ರಾಜ್‌, ಪ್ರಮೀಳಾ ಜೋಷಾಯ್, ಸುಂದರ್‌ ರಾಜ್‌, ಅರ್ಜುನ್‌ ಸರ್ಜಾ, ಧ್ರುವ ಸರ್ಜಾ ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಪತಿಯ ಶವದ ಮುಂದೆ ಮೇಘನಾ ರಾಜ್‌ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರ ಕರುಳು ಹಿಂಡುವಂತಿತ್ತು. ತಾಯಿಯನ್ನು ತಬ್ಬಿಕೊಂಡು ಧ್ರುವ ಸರ್ಜಾ ಕಣ್ಣೀರು ಸುರಿಸಿದರು. ಅಂತಿಮ ವಿಧಿವಿಧಾನಗಳನ್ನು ಚಿರು ತಂದೆ ವಿಜಯ್‌ ಕುಮಾರ್‌ ನೆರವೇರಿಸಿದರು.

ನೆಚ್ಚಿನ ನಟನನ್ನು ಕೊನೇ ಬಾರಿ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಬೃಂದಾವನ ಫಾರ್ಮ್‌ ಹೌಸ್‌ ಬಳಿ ಜಮಾಯಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಬೇಕಾಯಿತು. ದುನಿಯಾ ವಿಜಯ್‌, ವಸಿಷ್ಠ ಸಿಂಹ, ರವಿಶಂಕರ್‌ ಗೌಡ, ಸತೀಶ್‌ ನೀನಾಸಂ, ತಾರಾ, ಪ್ರಜ್ವಲ್‌ ದೇವರಾಜ್‌ ಮುಂತಾದವರು ಅಂತಿಮ ನಮನ ಸಲ್ಲಿಸಿದರು.

Comments are closed.