ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದರ ಪರಿಣಾಮ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಮಂಗಳವಾರಕ್ಕೆ ನಗರದಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.
ಜೂನ್.1ರಿಂದ ಜೂನ್9ರ ಸಂಜೆಯವರೆಗೆ ನಗರದಲ್ಲಿ 161 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿದ ಸಂಖ್ಯೆಯೇ ಹೆಚ್ಚಾಗಿವೆ.
ಜೂನ್ 1ರಿಂದ ಜೂನ್6ರವರೆಗೆ ನಗರದಲ್ಲಿ ಹೊಸದಾಗಿ 24 ಕಂಟೈನ್ಮೆಂಟ್ ಪ್ರದೇಶ ಹುಟ್ಟಿಕೊಂಡಿದ್ದು, ಕಂಟೈನ್ಮೆಂಟ್ ಪ್ರದೇಶ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಇನ್ನು ಜೂ.7ರ ನಂತರ ಸೋಂಕು ಪತ್ತೆಯಾದ ಪ್ರದೇಶಗಳನ್ನು ಪರಿಗಣಿಸಿದರೆ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಈ ವರೆಗೆ ಬಿಬಿಎಂಪಿಯ 87 ವಾರ್ಡ್ ಗಳಲ್ಲಿ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಇನ್ನು 52 ವಾರ್ಡ್ ಗಳ 64 ಪ್ರದೇಶದಲ್ಲಿ ಕೊರೋನಾ ಸೋಂಕಿತರು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಈ ವಾರ್ಡ್ ಗಳಲ್ಲಿ ಕಂಟೈನ್ಮೆಂಟ್ ಮುಂದುವರೆಸಲಾಗಿದೆ. 198 ವಾರ್ಡ್ ಪೈಕಿ 11 ವಾರ್ಡ್ ಗಳಲ್ಲಿ ಈ ವರೆಗೆ ಒಂದೇ ಒಂದು ಕೊರೋನಾ ಸೋಂಕು ಈ ವರೆಗೆ ಪತ್ತೆಯಾಗಿಲ್ಲ.
Comments are closed.