ಚಿಕ್ಕಮಗಳೂರು: ಕೊರೊನಾ ಸೋಂಕು ಮುಕ್ತವಾಗಿದ್ದ ರಾಜ್ಯದ ಏಕೈಕ ಜಿಲ್ಲೆ ಚಿಕ್ಕಮಗಳೂರು ಕೂಡ ಆ ಪಟ್ಟವನ್ನು ಕಳೆದುಕೊಂಡಿದೆ. ಕಾಫಿನಾಡಿಗೆ ಮತ್ತೆ ಕೋವಿಡ್-19 ಸೋಂಕು ವಕ್ಕರಿಸಿದೆ.
ಅದರಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಈತನಿಗೆ ಸೋಂಕು ತಗುಲಿದ್ದು ಹೇಗೆ ಎಂಬುದೂ ತಿಳಿದು ಬಂದಿಲ್ಲ. ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೋವಿಡ್-19 ಭಯ ಆರಂಭವಾಗಿದೆ.
ಸೋಂಕಿತ 15 ವರ್ಷದ ಬಾಲಕ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ವಿದ್ಯಾರ್ಥಿಯಾಗಿದ್ದಾನೆ. ಈತನಲ್ಲಿ ಸೋಂಕು ಕಾಣಸಿಕೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಈತ ವಾಸವಿದ್ದ ಕೆ. ದಾಸರಹಳ್ಳಿ ಗ್ರಾಮವನ್ನು ಸೀಲ್‌ಡೌನ್ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಈ ವಿದ್ಯಾರ್ಥಿಯ ಸಂಪರ್ಕದಲ್ಲಿ 55 ಜನರನ್ನು ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ.
ಈ ಹಿಂದೆ ಬಹಳ ದೀರ್ಘ ಕಾಲದ ನಂತರ ಚಿಕ್ಕಮಗಳೂರಿನಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ಆದರೆ ಸೋಂಕು ಪತ್ತೆಯಾಗಿದ್ದ 18 ಜನರೂ ಬಲುಬೇಗ ಗುಣಮುಖರಾಗಿ ಜಿಲ್ಲೆ ಸೋಂಕು ಮುಕ್ತವಾಗಿತ್ತು. ಗುರುವಾರದವರೆಗೂ ರಾಜ್ಯದ ಏಕೈಕ ಕೊರೊನಾ ಮುಕ್ತ ಜಿಲ್ಲೆಯಾಗಿ ಚಿಕ್ಕಮಗಳೂರು ಗುರುತಿಕೊಂಡಿತ್ತು.
ಇದೀಗ ಚಿಕ್ಕಮಗಳೂರು ಕೂಡ ಕೊರೊನಾ ಕೂಪಕ್ಕೆ ಬಿದ್ದಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳೂ ಈಗ ಕೊರೊನಾಮಯವಾಗಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 19 ಪ್ರಕರಣಗಳು ದೃಢಪಟ್ಟಿದ್ದು ಇವರಲ್ಲಿ 18 ಜನರು ಗುಣಮುಖರಾಗಿದ್ದಾರೆ. ಸದ್ಯ 1 ಸಕ್ರಿಯ ಪ್ರಕರಣ ಮಾತ್ರ ಜಿಲ್ಲೆಯಲ್ಲಿದೆ.
Comments are closed.