ಕರ್ನಾಟಕ

ಬೆಂಗಳೂರಿನಲ್ಲಿ ಸೈಟ್ ಆಸೆ ತೋರಿಸಿ, ವಂಚಿಸುವ ದೊಡ್ಡ ವಂಚನೆ ಜಾಲ

Pinterest LinkedIn Tumblr


ಬೆಂಗಳೂರು (ಜೂ.12): ಇದು ಬಿಡಿಎನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ನಡೆದಿರುವ ಬೃಹತ್ ವಂಚನೆ. ನಿವೇಶನಗಳನ್ನು ರಿಯಾಯಿತಿ ಮತ್ತು ಆಕರ್ಷಕ ದರದಲ್ಲಿ ಕೊಡಿಸುತ್ತೇನೆಂದು ಹೇಳಿ ಐನೂರಕ್ಕೂ ಹೆಚ್ಚು ಜನರಿಗೆ ಮಕ್ಮಲ್ ಟೋಪಿ ಹಾಕಿದಂಥ, ಮಹಾ ವಂಚಕ ಸೆರೆಯಾದ ಪ್ರಕರಣ. ವಂಚಕನ ಸೆರೆಯಿಂದ ಸಾಕಷ್ಟು ಅಮಾಯಕರು ಮೋಸ ಹೋದ ಘಟನೆಗಳು ಬೆಳಕಿಗೆ ಬಂದಿವೆ.

ವಂಚಕ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈತ ವಿಜಯಾನಂದಸ್ವಾಮಿ, ಹೇಳಿಕೊಳ್ಳೋಕೆ ರೈತ ಸಂಘದ ಮಹಾನ್ ಮುಖಂಡ. ಈತ ಹೆಸರಿನಲ್ಲಿ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ಮಾಡಿಕೊಂಡಿದ್ದಾನೆ. ಚಾಮರಾಜಪೇಟೆಯಲ್ಲಿ ಕೇಂದ್ರ ಕಚೇರಿಯನ್ನಾಗಿ ಮಾಡಿಕೊಂಡು ಅಲ್ಲಿಗೆ ಅಮಾಯಕರನ್ನು ಕರೆಸಿ ಅವರಿಂದ ಹಣ ಪೀಕಿ, ನಕಲಿ‌ ನಿವೇಶನ ಹಂಚಿಕೆ ಪತ್ರ ನೀಡಿ ವಂಚಿಸುತ್ತಿದ್ದ. ವಿಜಯಾನಂದ ಸ್ವಾಮಿ ಎನ್ನುವ ವಂಚಕ ತನ್ನ ಬೆನ್ನಿಗೆ ಒಂದಷ್ಟು ಜನರನ್ನು ಕಟ್ಟಿಕೊಂಡು ಅವರನ್ನು ಅಮಾಯಕರ ಬಳಿಗೆ ಕಳುಹಿಸಿ ಕೊಡುತ್ತಿದ್ದ.

ಇವರು ಬಿಡಿಎ ಕಚೇರಿಗೆ ನಿವೇಶನ ಬೇಕೆಂದು ಬರುವ ಅದರಲ್ಲೂ ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳನ್ನೇ ಬಯಸುವವರಿಗೆ ಒಳ್ಳೆಯ ಮಾತನಾಡಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಒಂದಷ್ಟು ಅಡ್ವಾನ್ಸ್ ಹಣವನ್ನು ಪಡೆದುಕೊಂಡು ಅವರನ್ನು ನೇರವಾಗಿ ಚಾಮರಾಜಪೇಟೆಯ ತಮ್ಮ “ಬಾಸ್” ಕಚೇರಿಗೆ ಕರೆದುಕೊಂಡು ಬರುತ್ತಿದ್ದರು. ಅಲ್ಲಿ ಸತ್ಯದ ತಲೆಗೆ ಹೊಡೆದ ರೀತಿಯಲ್ಲಿ ಸೃಷ್ಟಿಸಿದ್ದ ನಕಲಿ ನಿವೇಶನಗಳ ಹಂಚಿಕೆ ಪತ್ರವನ್ನು ತೋರಿಸಿ ಸದಾನಂದ ಸ್ವಾಮಿ‌ ಗ್ರಾಹಕರಿಗೆ ನಂಬಿಕೆ ಬರುವಂತೆ ಮಾಡಿ ಅವರನ್ನು ಹಳ್ಳಕ್ಕೆ ತಳ್ಳುತ್ತಿದ್ದ.

ಆತನ ನಯವಾದ ವಂಚನೆಯ ಮಾತುಗಳು, ಹಾಗೆಯೇ ಆತನ ಬಳಿ ಇರುತ್ತಿದ್ದ ಹಂಚಿಕೆ ಪತ್ರಗಳನ್ನು ನೋಡಿ ಮೋಸ ಹೋಗುತ್ತಿದ್ದ ಜನ ಅಲ್ಲಿಯೇ ಅವನಿಗೆ ಹಣವನ್ನು ಕೊಟ್ಟು ನಿವೇಶನಗಳ ಹಂಚಿಕೆ ಪತ್ರವನ್ನು ಕೊಂಡೊಯ್ಯುತ್ತಿದ್ದರು. ಆದರೆ ಕಳ್ಳ ಯಾವತ್ತಿದ್ದರೂ ಒಮ್ಮೆ ಸಿಕ್ಕಿ ಕೊಳ್ಳಲೇ ಬೇಕು ಎನ್ನುವ ಗಾದೆಯಂತೆ ಮೊನ್ನೆಯ ಒಂದು ಪ್ರಕರಣದಲ್ಲಿ ಆತನ ವಂಚನೆ ಬಯಲಿಗೆ ಬಂದಿದೆ.

ವಂಚನೆ ಬಯಲಿಗೆ ಬಂದಿದ್ದು ಹೀಗೆ:

ವ್ಯಕ್ತಿಯೊಬ್ಬರು ಆರು ನಿವೇಶನಗಳಿಗೆ ಸಂಬಂಧಪಟ್ಟಂತೆ ಆತನಿಗೆ 3 ಲಕ್ಷ ಹಣವನ್ನು ಅಡ್ವಾನ್ಸಾಗಿ ನೀಡಿದ್ದರು. ಆತ ನೀಡಿದಂಥ ಹಂಚಿಕೆ ಪತ್ರವನ್ನು ಉಪ ಕಾರ್ಯದರ್ಶಿ-1 ಅವರ ಅವಗಾಹನೆಗೆ ಕಳುಹಿಸಿದ ಸಂದರ್ಭದಲ್ಲಿ, ಆ ಹಂಚಿಕೆ ಪತ್ರಗಳಲ್ಲಿ ಇದ್ದಂಥ ಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ಆ ಪತ್ರಗಳನ್ನು ಕಮೀಷನರ್ ಮಹಾದೇವ್ ಅವರಿಗೆ ರವಾನಿಸಿದ್ದರು. ಇದರಲ್ಲೇನೋ ಅಕ್ರಮದ ವಾಸನೆ ಇದೆ ಎನ್ನುವುದನ್ನು ಅರಿತ ಕಮಿಷನರ್ ಮಹಾದೇವ್, ತಕ್ಷಣಕ್ಕೆ ಪ್ರಕರಣದ ತನಿಖೆಯ ಉಸ್ತುವಾರಿಯನ್ನು ಬಿಡಿಎ ಜಾಗೃತ ದಳದ ಎಸ್​ಪಿ ಶಿವಕುಮಾರ್ ಗುಣಾರೆ ಅವರಿಗೆ ವಹಿಸಲಾಗಿತ್ತು.ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಶಿವಕುಮಾರ್ ಹಾಗೂ ಅವರ ತಂಡ ವಂಚಕ ವಿಜಯಾನಂದಸ್ವಾಮಿಯ ಜಾಲದ ಹಿಂದೆ ಬಿದ್ದಿತ್ತು. ವಂಚನೆಯ ಪುರಾಣದ ಇಂಚಿಂಚೂ ಮಾಹಿತಿಯನ್ನ ಸಾಕ್ಷ್ಯ ಸಮೇತ ಸಂಗ್ರಹಿಸಿತ್ತು. ಈ ವರದಿಯನ್ನ ಕಮಿಷನರ್ ಮಹಾದೇವ್​​ಗೆ ನೀಡಿದ್ದಾರೆ. ಬಿಡಿಎ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಹಾ ಹಾಗೂ ಬೃಹತ್ ವಂಚನೆಯ ಜಾಲವನ್ನು ಅತಿ ಕಡಿಮೆ ಅವಧಿಯಲ್ಲಿ ಪತ್ತೆ ಹಚ್ಚಿದ ಶಿವಕುಮಾರ್ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಕಮಿಷನರ್ ಮಹಾದೇವರವರು ಮೆಚ್ಚುಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Comments are closed.