ಹುಬ್ಬಳ್ಳಿ(ಜೂ.14): ಹುಬ್ಬಳ್ಳಿಯಲ್ಲಿ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಗ್ರಾಹಕರು ಕೊರೋನಾ ಭಯದಿಂದ ಹೊಟೆಲ್‌ಗಳತ್ತ ಬರುತ್ತಿಲ್ಲ. ಗ್ರಾಹಕರ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದ್ದು, ಹೋಟೆಲ್‌ಗಳು ಖಾಲಿ ಖಾಲಿಯಾಗಿವೆ. ಸರ್ಕಾರದ ಮಾರ್ಗಸೂಚಿಯಂತೆ ಹೋಟೆಲ್‌ಗಳು ಮುಂಜಾಗ್ರತೆ ವಹಿಸಿವೆ.
ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ಗ್ರಾಮೀಣ ಪ್ರದೇಶ ಹಾಗೂ ಹೊರ ಜಿಲ್ಲೆಗಳಿಂದ ಹುಬ್ಬಳ್ಳಿಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ಹೀಗಾಗಿ ಹೋಟೆಲ್ ಉದ್ಯಮ ನಷ್ಟದಲ್ಲಿದ್ದು, ಬಂಡವಾಳ ಹಾಕಿ ದೊಡ್ಡ ಹೋಟೆಲ್‌ಗಳನ್ನು ಮಾಡಿದ್ದ ಉದ್ಯಮಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಉದ್ಯಮಿಗಳು ಹೊಟೆಲ್‌ಗಳ ಬಾಗಿಲು ಬಂದ್ ಮಾಡಬೇಕಾಗುತ್ತೆ ಎನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವುದು ವಾಣಿಜ್ಯ ನಗರ ಹುಬ್ಬಳ್ಳಿಯ ಮಾರುಕಟ್ಟೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೊರೋನಾ ಭೀತಿಯಿಂದಾಗಿ ವ್ಯಾಪಾರ ವಹಿವಾಟು ಗಣನೀಯವಾಗಿ ಇಳಿಮುಖವಾಗಿದೆ.
ಖರೀದಿದಾರರಿಲ್ಲದೆ ಅಂಗಡಿ ಮುಂಗಟ್ಟುಗಳು ಬಣಗುಡುತ್ತಿವೆ. ನಷ್ಟದ ಸುಳಿಗೆ ಸಿಲುಕಿರುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಗ್ರಾಮೀಣ ಪ್ರದೇಶದಿಂದ ಗ್ರಹಬಳಕೆ ವಸ್ತುಗಳ ಖರೀದಿಗೆ ಹುಬ್ಬಳ್ಳಿಗೆ ಬರುತ್ತಿದ್ದ ಜನರ ಪ್ರಮಾಣ ಕುಸಿದಿದೆ. ವೀಕೆಂಡ್ ದಿನಗಳಲ್ಲಿಯೂ ಗ್ರಾಹಕರು ಮಾರುಕಟ್ಟೆಯತ್ತ ಮುಖ ಮಾಡದಿರುವುದು ವ್ಯಾಪಾರಿಗಳ ಚಿಂತೆಯನ್ನು ಹೆಚ್ಚಿಸಿದೆ. ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ. ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ಟರ್ನಓವರ್ ನಡೆಸುತ್ತಿದ್ದ ಮಳಿಗೆಗಳತ್ತ ಜನರು ಬರುತ್ತಿಲ್ಲ.
Comments are closed.