ಬೆಂಗಳೂರು(ಜೂನ್ 27): ರಾಜ್ಯದಲ್ಲಿ ಕೊರೋನಾ ಸೋಂಕು ಹದ್ದುಮೀರಿ ವ್ಯಾಪಿಸುತ್ತಿರುವುದರಿಂದ ಸರ್ಕಾರ ಮತ್ತೊಮ್ಮೆ ಸಂಡೆ ಲಾಕ್ಡೌನ್ ಕ್ರಮ ಜರುಗಿಸಲು ನಿರ್ಧರಿಸಿದೆ. ಜುಲೈ 5ರಿಂದಲೇ ಪ್ರತೀ ಭಾನುವಾರದಂದು ರಾಜ್ಯಾದ್ಯಂತ ಲಾಕ್ಡೌನ್ ಮಾಡಲು ಸಿಎಂ ಕಚೇರಿ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇವತ್ತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾನುವಾರದ ಲಾಕ್ಡೌನ್ ಸೇರಿದಂತೆ ವಿವಿಧ ಕ್ರಮಗಳನ್ನ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು.
ರಾಜ್ಯವ್ಯಾಪಿ ಲಾಕ್ಡೌನ್ ಮಾಡಬೇಕೆಂದು ವಿಪಕ್ಷಗಳು ಒತ್ತಡ ಹಾಕುತ್ತಿದ್ದರೂ ಆರ್ಥಿಕತೆಯ ದೃಷ್ಟಿಯಿಂದ ಆ ಕ್ರಮ ಕೈಗೊಳ್ಳಲು ಸರ್ಕಾರ ನಿರಾಕರಿಸಿದೆ. ಆದರೆ, ತಜ್ಞರ ಸಲಹೆ ಪಡೆದು ಪರ್ಯಾಯ ಕ್ರಮಗಳನ್ನ ಜಾರಿಗೊಳಿಸಲು ನಿರ್ಧರಿಸಿದೆ. ಅದರಂತೆ, ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ವಾರದಲ್ಲಿ ಎರಡು ದಿನ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದೆ. ಜುಲೈ 10ರಿಂದ ಒಂದು ತಿಂಗಳ ಕಾಲ ಈ ಕ್ರಮ ಜಾರಿಯಲ್ಲಿರುತ್ತದೆ. ಈ ಮುಂಚೆ, ತಿಂಗಳಲ್ಲಿ ಪ್ರತಿ ಭಾನುವಾರದ ಜೊತೆಗೆ 2ನೇ ಮತ್ತು 4ನೇ ಶನಿವಾರದಂದು ರಾಜ್ಯ ಸರ್ಕಾರಿ ನೌಕರರಿಗೆ ರಜೆ ಇರುತ್ತಿತ್ತು. ಈಗ ಎಲ್ಲಾ ಶನಿವಾರ ಮತ್ತು ಭಾನುವಾರದಂದು ರಜೆ ಇರಲಿದೆ.
ಇವತ್ತಿನ ಸಭೆಯಲ್ಲಿ ವಾರದಲ್ಲಿ ಎರಡು ದಿನ ಲಾಕ್ಡೌನ್ ಮಾಡುವ ಚಿಂತನೆ ನಡೆದಿತ್ತು. ಆದರೆ, ಸದ್ಯಕ್ಕೆ ಸಂಡೇ ಲಾಕ್ಡೌನ್ ಮಾತ್ರ ಮಾಡಿ, ಒಂದೆರಡು ವಾರಗಳ ಬಳಿಕ ಅದರ ಪರಿಣಾಮ ನೋಡಿಕೊಂಡು ವಾರಕ್ಕೆರಡು ದಿನ ಲಾಕ್ಡೌನ್ ಮಾಡುವುದು ಒಳ್ಳೆಯದು ಎಂಬ ತಜ್ಞರ ಅಭಿಪ್ರಾಯವನ್ನ ಸ್ವೀಕರಿಸಲಾಗಿದೆ.
ಕರ್ಫ್ಯೂ ಅವಧಿ ಹೆಚ್ಚಳ:
ಈಗ ರಾತ್ರಿ 9ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇದೆ. ಈಗ ಒಂದು ಗಂಟೆ ಮುಂಚಿತವಾಗಿ, ಅಂದರೆ ರಾತ್ರಿ 8 ಗಂಟೆಗೇ ಕರ್ಫ್ಯೂ ಶುರುವಾಗಲಿದೆ. ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಸೋಂಕಿತರನ್ನು ತ್ವರಿತವಾಗಿ ಕೋವಿಡ್ ಆಸ್ಪತ್ರೆಗೆ ಸೇರಿಸಲು ಸೆಂಟ್ರಲೈಸ್ಡ್ ಬೆಡ್ ಅಲೋಕೇಶನ್ ಸಿಸ್ಟಂ (ಕೇಂದ್ರೀಯ ಬೆಡ್ ವ್ಯವಸ್ಥೆ) ತಂತ್ರಾಂಶಕ್ಕೆ ನಿರ್ಧಾರ ಮಾಡಲಾಗಿದೆ. ಸೋಂಕಿತರನ್ನ ಆಸ್ಪತ್ರೆಗೆ ಸಾಗಿಸಲು ಈಗಿರುವ 250 ಆಂಬುಲೆನ್ಸ್ನ ಸಂಖ್ಯೆ ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಮೃತಪಟ್ಟ ಸೋಂಕಿತರ ದೇಹಗಳನ್ನ ಸಾಗಿಸಲು ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆಗೆ ತೀರ್ಮಾನ ಮಾಡಲಾಗಿದೆ. ಆಂಬುಲೆನ್ಸ್ ಇರುವ ಸ್ಥಳಗಳನ್ನ ಮತ್ತು ಅವುಗಳ ಚಲನವಲನಗಳನ್ನ ಗುರುತಿಸಲು ಪೊಲೀಸ್ ಕಂಟ್ರೋಲ್ ರೂಮ್ ವೈರ್ಲೆಸ್ ಸೇವೆಯನ್ನ ಬಳಸಿಕೊಳ್ಳಲು ಸರ್ಕಾರ ಸೂಚನೆ ನೀಡಲಾಗಿದೆ.ಬೆಂಗಳೂರಿನಲ್ಲಿ ಹೋಲ್ಸೇಲ್ ತರಕಾರಿ ಮಾರುಕಟ್ಟೆಗಳಲ್ಲಿ ಜನದಟ್ಟನೆ ಹೆಚ್ಚಾಗುತ್ತಿದೆ. ಇದನ್ನ ತಪ್ಪಿಸಲು ಇನ್ನಷ್ಟು ಸಗಟು ತರಕಾರಿ ಮಾರುಕಟ್ಟೆ ತೆರೆಯಲು ಬಿಬಿಎಂಪಿ ಆಯುಕ್ತರಿಗೆ ಸಿಎಂ ಸೂಚಿಸಿದ್ಧಾರೆ.
ಬೆಂಗಳೂರನ್ನ ಹೊರಗಿನಿಂದ ಪ್ರವೇಶ ನಿರ್ಬಂಧಿಸುವ ಕುರಿತೂ ಇವತ್ತಿನ ಸಿಎಂ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ, ಪ್ರವೇಶ ನಿರ್ಬಂಧ ಮಾಡಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಡ್ಡಿಯಾಗಬಹುದು. ಆದ್ದರಿಂದ ಪರೀಕ್ಷೆ ಬಳಿಕ ಆ ನಿರ್ಧಾರ ತೆಗೆದುಕೊಳ್ಳಲು ಸರ್ಕಾರ ಆಲೋಚಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಆಯುಕ್ತರ ಮೇಲೆ ಇರುವ ಕೆಲಸದ ಹೊರೆ ಕಡಿಮೆಗೊಳಿಸಲು ಬಿಬಿಎಂಪಿಯ 8 ವಲಯಗಳ ಜಂಟಿ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಈ ಜಂಟಿ ಆಯುಕ್ತರ ಜೊತೆ ಕೆಲಸ ಮಾಡಲು ಕೆಎಎಸ್ ಅಧಿಕಾರಿಗಳನ್ನ ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ.
ವೈದ್ಯರ ಕೊರತೆ ನೀಗಿಸಲು ಕಾರ್ಮಿಕ ಇಲಾಖೆಯಿಂದ ನೇಮಕವಾಗಿರುವ 180 ಇಎಸ್ಐ ವೈದ್ಯರನ್ನ ಕೋವಿಡ್ ಕರ್ತವ್ಯಕ್ಕೆ ಜೋಡಿಸಿಕೊಳ್ಳಲಾಗುತ್ತಿದೆ. ಪರೀಕ್ಷಾರ್ಥಿ ತಹಶೀಲ್ದಾರ್ಗಳನ್ನ ಕೋವಿಡ್ ಆಸ್ಪತ್ರೆ ಮತ್ತು ಕೇರ್ ಸೆಂಟರ್ಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲು ಸರ್ಕಾರ ಸೂಚಿಸಿದೆ.
ಬೆಂಗಳೂರಿನಲ್ಲಿ ಲಭ್ಯವಿರುವ ಕಲ್ಯಾಣ ಮಂಟಪ, ಹಾಸ್ಟೆಲ್ಗಳು ಹಾಗೂ ಇನ್ನಿತರ ಸಂಸ್ಥೆಗಳನ್ನ ಕೋವಿಡ್ ಕೇರ್ ಸೆಂಟರ್ಗಳಿಗೆ ಮೀಸಲಿಡುವುದು; ರೈಲ್ವೆ ಇಲಾಖೆಯಿದ ಬೆಡ್ಗಳ ಕೋಚ್ ಅನ್ನ ಪಡೆಯಲು ಅವಶ್ಯ ಕ್ರಮ; ಮೆಡಿಕಲ್ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ಗಳ ಪೈಕಿ ಶೇ. 50ರಷ್ಟನ್ನು ಕೋವಿಡ್ ರೋಗಿಗಳ ಸಲುವಾಗಿ ಮೀಸಲಿಡಬೇಕೆಂದು ಸರ್ಕಾರ ತೀರ್ಮಾನಿಸಿದೆ.
Comments are closed.