ಬೆಂಗಳೂರು: ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು ಸಿಗದೆ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಒಬ್ಬ ಕಾನ್ಸ್‌ಟೇಬಲ್, ನಿವೃತ್ತ ಎಸ್‌ಐ ಹಾಗೂ ಆಭರಣ ವರ್ತಕ ಸೇರಿ ನಗರದಲ್ಲಿ ಮೂವರು ಕೊನೆಯುಸಿರೆಳೆದಿದ್ದಾರೆ.
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ರವಿಕುಮಾರ್ (38) ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಿಗದೆ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಲಿವರ್ ಸಮಸ್ಯೆಯಿಂದ ರವಿಕುಮಾರ್ ಬಳಲುತ್ತಿದ್ದರು. ಗುರುವಾರ (ಜು.2ರಂದು) ಏಕಾಏಕಿ ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ಅವರನ್ನು ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆಗೆ ವೆಂಟಿಲೇಟರ್ ಬೇಕಾಗಿದ್ದು, ಅದು ಈಗ ಖಾಲಿ ಇಲ್ಲ ಎಂದು ಐದಾರು ಆಸ್ಪತ್ರೆಗಳಲ್ಲಿ ಸಬೂಬು ಹೇಳಿ ಕಳಿಸಿದ್ದಾರೆ. ಹೀಗಾಗಿ, ವಿವಿಧ ಆಸ್ಪತ್ರೆಗಳಿಗೆ ರಾತ್ರಿಯಿಡೀ ಸುತ್ತಾಡಿದ ರವಿಕುಮಾರ್, ಶುಕ್ರವಾರ ಆಸ್ಪತ್ರೆಗೆ ಹೋದರಾಯಿತು ಎಂದು ಮನೆಗೆ ಮರಳಿದ್ದರು. ಆದರೆ, ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಪರಿಸ್ಥಿತಿ ಬಿಗಡಾಯಿಸಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಮನೆಯಲ್ಲೇ ಕೊನೆಯುಸಿರೆಳೆದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಪಂಚಾಕ್ಷ ರಿ (67) ಎಂಬುವರು ವೆಂಟಿಲೇಟರ್ ಕೊರತೆಯಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಸುನೀಗಿದ್ದಾರೆ.
ಕೊರೊನಾ ಸೋಂಕು ಕುರಿತು ರಿಪೋರ್ಟ್ ಬೇಗ ಲಭ್ಯವಾಗದೇ ಇರುವುದು ಕೂಡ ಆಸ್ಪತ್ರೆಗಳಿಗೆ ಸೇರಿಸಿಕೊಳ್ಳದೇ ಇರಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಜು.2ರಂದು ರಾತ್ರಿ 11ರ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪಂಚಾಕ್ಷ ರಿ ನಿಧನರಾಗಿದ್ದಾರೆ. ಇದಕ್ಕೂ ಮುನ್ನ ಸರಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿ ಸುಮಾರು 8 ಆಸ್ಪತ್ರೆಗಳಿಗೆ ಕುಟುಂಬ ಸದಸ್ಯರು ಅಲೆದಾಡಿದ್ದಾರೆ. ಅಂತಿಮವಾಗಿ ಸಣ್ಣ ಖಾಸಗಿ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿದೆ. ಆದರೆ, ಅಷ್ಟೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿತ್ತು. ವೆಂಟಿಲೇಟರ್ ಅಳವಡಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಜು.1ರಂದು ರಾತ್ರಿ ಪಂಚಾಕ್ಷ ರಿ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, ಕ್ಲಿನಿಕ್‌ಗೆ ತೆರಳಿ ಔಷಧಿ ಪಡೆದಿದ್ದರು. ಆದರೆ, ಮರು ದಿನ ಜ್ವರ ಕಮ್ಮಿಯಾಗದೇ ಉಸಿರಾಟಕ್ಕೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ, ಆತಂಕಗೊಂಡ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ವೆಂಟಿಲೇಟರ್ ಬೇಕೆಂದು ಬೇರೆ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ನಂತರ ಮೂರ್ನಾಲ್ಕು ಖಾಸಗಿ ಆಸ್ಪತ್ರೆಗಳಿಗೆ ಹೋಗಿದ್ದಾರೆ. ಅಲ್ಲಿ ವೆಂಟಿಲೇಟರ್ ಇಲ್ಲ ಎಂಬ ಉತ್ತರ ಬಂದಿದೆ. ಅಲ್ಲದೆ, ಕೊರೊನಾ ವರದಿ ಕೇಳಿದ್ದಾರೆ.
ನಂತರ ವಿಕ್ಟೋರಿಯಾ, ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ವೆಂಟಿಲೇಟರ್ ಇರಲಿಲ್ಲ. ಪಂಚಾಕ್ಷರಿ ಕುಟುಂಬದವರು ಕಾಡಿ ಬೇಡಿದ ಕಾರಣ 20 ನಿಮಿಷ ಆಕ್ಸಿಜನ್ ನೀಡಿದ್ದರು. ನಂತರ ಬೇರೆ ಆಸ್ಪತ್ರೆಗೆ ಹೋಗಲು ಸೂಚಿಸಲಾಗಿತ್ತು. ಖಾಸಗಿ ಆಸ್ಪತ್ರೆಯ ಲ್ಯಾಬ್‌ನಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಯಿತು. 24 ತಾಸಲ್ಲಿ ವರದಿ ಬರುತ್ತದೆ ಎಂದು ವೈದ್ಯರು ಹೇಳಿದ್ದರು. ಆದರೆ, 48 ತಾಸಾದರೂ ವರದಿ ಬರಲಿಲ್ಲ. ಹಲವು ಆಸ್ಪತ್ರೆಗಳಿಗೆ ಅಲೆದು ಅಲೆದು ಬೇಸರವಾಯಿತು. ಕೊನೆಗೆ ಗುರುವಾರ ಸಂಜೆ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್ ಇದೆ ಎಂದು ದಾಖಲಿಸಿಕೊಂಡರು. ಆದರೆ, ಅಷ್ಟೊತ್ತಿಗೆ ಪರಿಸ್ಥಿತಿ ಕೈ ಮೀರಿತ್ತು. ಚಿಕಿತ್ಸೆ ಫಲಿಸದೆ ನಿಧನರಾದರು ಎಂದು ಪುತ್ರಿ ನೋವಿನಿಂದ ನುಡಿದರು.
ವೆಂಟಿಲೇಟರ್ ಸಿಗದೆ ಆಭರಣ ವರ್ತಕ ನವರತನ್‌ಲಾಲ್ (40) ಎಂಬುವರು ಕಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ವಿಜಯನಗರದಲ್ಲಿ ವಾಸವಿದ್ದ ನವರತನ್‌ಲಾಲ್ ಅವರಿಗೆ ಜೂ.27ರಂದು ಜ್ವರ ಮತ್ತು ತೀವ್ರ ಮೈಕೈ ನೋವು ಕಾಣಿಸಿಕೊಂಡಿತ್ತು. ಸಮೀಪದ ಕ್ಲಿನಿಕ್‌ನಲ್ಲಿ 2 ದಿನ ದಾಖಲಾಗಿದ್ದರು. ಆದರೆ, ಪರಿಸ್ಥಿತಿ ಸುಧಾರಿಸದ ಕಾರಣ ವಿಜಯನಗರ ಫೀವರ್ ಕ್ಲಿನಿಕ್ ಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ಬಳಿಕ ವೆಂಟಿಲೇಟರ್ ಇರುವ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಲಾಗಿತ್ತು. ಹೀಗಾಗಿ, ನವರತನ್ ಅವರನ್ನು ಸಹೋದರ ಅನಿಲ್ ಖಾಸಗಿ ವಾಹನದಲ್ಲೇ ವಿಕ್ಟೋರಿಯಾ ಮತ್ತು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಯೂ ವೆಂಟಿಲೇಟರ್ ಇಲ್ಲ ಎಂಬ ಉತ್ತರ ಬಂದಿದೆ. ಹೀಗಾಗಿ, ಅಪೋಲೋ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿ ಅಂತಿಮವಾಗಿ ಕಿಮ್ಸ್‌ಗೆ ತೆರಳಿದ್ದಾರೆ. ಕಿಮ್ಸ್‌ನಲ್ಲಿ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ಕುರಿತು ಮೌಖಿಕವಾಗಿ ತಿಳಿಸಲಾಗಿತ್ತು. ಆದರೆ, ಅಲ್ಲಿಅಗತ್ಯವಿರುವ ವೆಂಟಿಲೇಟರ್ ಇರಲಿಲ್ಲ. ಆದರೆ, ಸಣ್ಣ ಗಾತ್ರದ ವೆಂಟಿಲೇಟರ್ ಇದೆ ಎಂದು ದಾಖಲಿಸಿಕೊಳ್ಳಲಾಗಿತ್ತು.
ಚಿಕಿತ್ಸೆ ಫಲಿಸದೆ ಜು.1ರಂದು ನವರತನ್ ನಿಧನರಾದರು. ಕಿಮ್ಸ್‌ನಲ್ಲಿ ಸರಿಯಾಗಿ ನೋಡಿಕೊಂಡಿಲ್ಲ. ಬೇರೆ ಕಡೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಇರಲಿಲ್ಲ ಎಂದು ವಾಪಸ್ ಕಳುಹಿಸಿದ್ದಾರೆ. ಐದು ದಿನಗಳ ಕಾಲ ಆಸ್ಪತ್ರೆಗಳಿಗೆ ಸುತ್ತಾಟ ಮತ್ತು ಚಿಕಿತ್ಸೆಗಾಗಿ ಅಂಗಲಾಚಿದ್ದೇವೆ. ಆದರೂ, ನನ್ನ ಸಹೋದರನನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಸಹೋದರ ಅನಿಲ್ ನುಡಿದರು.
Comments are closed.