ಚಿಕ್ಕಮಗಳೂರು: ಕ್ರೂರಿ ಕೊರೋನಾ ಮುಂದೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೆಮ್ಮಾರಿ ಕೊರೋನಾ ವಕ್ಕರಿಸಿದರೆ ಹೆತ್ತು ಹೊತ್ತು ಬೆಳೆಸಿದ ತಾಯಿಯೂ ದೂರವಾಗಿಬಿಡ್ತಾಳೆ. ಹೆಗಲ ಮೇಲೆ ಕೂರಿಸಿಕೊಂಡು ಆಕಾಶದಲ್ಲಿ ಚಂದಮಾಮನ ತೋರಿಸಿದ ಅಪ್ಪನೂ ಕೂಡ ಕಣ್ಣಿಗೆ ಕಾಣದಂತಾಗುತ್ತಾನೆ. ಕಾಫಿನಾಡಿನಲ್ಲಿ ಶಿಕ್ಷಕನನ್ನು ಬಲಿ ತೆಗೆದುಕೊಂಡ ಕೊರೋನಾ ಇದೀಗ ಮತ್ತೆ ಕುಟುಂಬ ಸದಸ್ಯರನ್ನು ಬಾಧಿಸುತ್ತಿದೆ. ಕ್ರೂರಿ ಕೊರೋನಾದ ಒಂದೊಂದು ಮುಖಗಳು ನಿಜಕ್ಕೂ ನೋವು ತರಿಸುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ 53 ವರ್ಷದ ಶಿಕ್ಷಕರೊಬ್ಬರು ಕೊರೋನಾ ಮುಂದೆ ಹೋರಾಟ ನಡೆಸಲಾಗದೇ ಸಾವಿಗೆ ಶರಣಾಗಿದ್ದಾರೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರು ಆಗಿದ್ದ ಸೋಂಕಿತ ವ್ಯಕ್ತಿ ನಿನ್ನೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅತ್ತ ಶಿವಮೊಗ್ಗದಲ್ಲಿ ತಂದೆ ಸಾವನ್ನಪ್ಪಿದರೆ, ಇತ್ತ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮೃತ ಸೋಂಕಿತ ವ್ಯಕ್ತಿಯ ಪುತ್ರ ಕೊರೋನಾ ಪಾಸಿಟಿವ್ ಬಂದು ಚಿಕಿತ್ಸೆ ಪಡೆಯೋ ಹಾಗಾಗಿದೆ.
ತಂದೆಯ ಮುಖ ನೋಡುವುದು ಇರಲಿ, ಕೊನೆ ಕ್ಷಣದಲ್ಲಿ ಅಪ್ಪನ ಜೊತೆ ಇರೋದಕ್ಕೂ ಸಾಧ್ಯವಾಗದ ಸ್ಥಿತಿಯನ್ನು ಕೊರೋನಾ ತಂದಿಟ್ಟಿದೆ. ನಿನ್ನೆ ಮಧ್ಯಾಹ್ನ ಶಿಕ್ಷಕ ಶಿವಮೊಗ್ಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರಿಂದ ರಾತ್ರಿ ಬೀರೂರಿನಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಅಪ್ಪನ ಸಂಪರ್ಕದಿಂದಲೇ ಕೊರೋನಾ ಸೋಂಕಿತನಾಗಿರುವ ಮಗ, ಕ್ರೂರ ವಿಧಿಗೆ ಯಾರನ್ನು ಶಪಿಸಬೇಕು ಎಂದು ತಿಳಿಯದೆ ಆಸ್ಪತ್ರೆ ಹಾಸಿಗೆ ಮೇಲೆ ಮಲಗಿದ್ದಾನೆ.
ಮೃತ ವ್ಯಕ್ತಿಗೆ ಪತ್ನಿ, ಪುತ್ರ ಹಾಗೂ ಪುತ್ರಿಯಿದ್ದು, ಈಗ ಮಗನಿಗೆ ಸೋಂಕು ತಗುಲಿದೆ. ಮೃತ ವ್ಯಕ್ತಿಯ ಪತ್ನಿ ಹಾಗೂ ಪುತ್ರಿಯ ಸ್ಯಾಂಪಲ್ಗಳನ್ನು ಪಡೆಯಲಾಗಿದೆ. ಈಗಾಗಲೇ ಮನೆಯ ಯಜಮಾನನನ್ನು ಕಳೆದುಕೊಂಡು ನೋವಿನಿಂದ ಕಂಗಲಾಗಿರುವ ಕುಟುಂಬಕ್ಕೆ ಮತ್ತೆ ಆತಂಕ ಎದುರಾಗಿದೆ. ಒಂದೆಡೆ ಪುತ್ರ ಸೋಂಕಿತನಾಗಿರುವುದರಿಂದ ಆಸ್ಪತ್ರೆ ಪಾಲಾಗಿದ್ದಾನೆ. ಇತ್ತ ಪತ್ನಿ, ಮಗಳು ಮನೆಯಲ್ಲಿದ್ದರೂ ಮೃತದೇಹವನ್ನು ನೋಡದಂತಾಗಿದೆ. ಕ್ರೂರಿ ಕೊರೋನಾದ ಅಟ್ಟಹಾಸಕ್ಕೆ ಇಡೀ ಕುಟುಂಬ ನಲುಗಿ ಹೋಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ ಹೆಮ್ಮಾರಿಯ ಹೊಡೆತಕ್ಕೆ ಇಬ್ಬರು ಬಲಿಯಾದಂತಾಗಿದ್ದು, ದಿನೇ ದಿನೇ ಸೋಂಕಿತರು ಕೂಡ ಹೆಚ್ಚಾಗ್ತಿದ್ದಾರೆ. ಒಟ್ಟಿನಲ್ಲಿ ಕಳೆದ 45 ದಿನಗಳವರೆಗೂ ನೆಮ್ಮದಿಯಾಗಿದ್ದ ಕಾಫಿನಾಡನ್ನು ಕೊರೋನಾ ದಿನೇ ದಿನೇ ಹಿಂಡಿ ಹಿಪ್ಪೆ ಮಾಡುತ್ತಿದೆ.
Comments are closed.