ಕರ್ನಾಟಕ

ರಸ್ತೆಬದಿಯಲ್ಲಿ ಕೊರೋನಾ ಸೋಂಕಿತನ ಮೃತದೇಹ ಮಳೆಯಲ್ಲಿ ನೆನೆಯುತ್ತಿದ್ದರೂ ತಲೆ ಹಾಕದ ಅಧಿಕಾರಿಗಳು

Pinterest LinkedIn Tumblr


ಬೆಂಗಳೂರು; ಬಳ್ಳಾರಿ ಮತ್ತು ಯಾದಗಿರಿಯಲ್ಲಿ ಕೊರೋನಾದಿಂದ ಮಡಿದವರ ಮೃತದೇಹಗಳನ್ನು ಕಸದಂತೆ ಎಸೆದು ಅಂತ್ಯಕ್ರಿಯೆ ನಡೆಸಿದ ಕಹಿ ಘಟನೆ ಮಾಸುವೇ ಮುನ್ನವೇ ಅದೇ ರೀತಿಯ ಅಮಾನವೀಯ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿಲ್ಲಿ ನಡೆದಿದೆ.

ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವವೊಂದು ಬಲಿಯಾಗಿರುವುದು ಅಷ್ಟೇ ಅಲ್ಲದೇ, ಮೂರು ಗಂಟೆಗಳ ಕಾಲ ಮೃತದೇಹವನ್ನು ರಸ್ತೆ ಬದಿಯೇ ಇಟ್ಟು ಕುಟುಂಬಸ್ಥರು ಕಣ್ಣೀರು ಹಾಕುತ್ತಿರುವುದು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ನಾಗರಿಕರು ಶಾಪ ಹಾಕಿದ್ದಾರೆ.

ನಗರದ ಶ್ರೀನಗರದಲ್ಲಿ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ಗಂಟಲು ಮಾದರಿಯನ್ನು ಕೊರೋನಾ ಪರೀಕ್ಷೆಗೆ ನೀಡಿದ್ದರು. ಇಂದು ಬೆಳಗ್ಗೆ ಪರೀಕ್ಷೆಯ ವರದಿಯಲ್ಲಿ ಆ ವ್ಯಕ್ತಿಗೆ ಕೊರೋನಾ ಇರುವುದು ದೃಢಪಟ್ಟಿದೆ. ವರದಿ ಬರುತ್ತಿದ್ದಂತೆ ಆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ಮುಂದಾಗಿ, ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. 15 ದಿನಕ್ಕಾಗುವಷ್ಟು ಬಟ್ಟೆ ತುಂಬಿದ ಚೀಲವನ್ನು ಹಿಡಿದು ಕಾದು ಕುಳಿತಿದ್ದಾರೆ. ಆದರೆ, ಸಂಜೆ 4 ಗಂಟೆಯಾದರೂ ಆ್ಯಂಬುಲೆನ್ಸ್​ ಸ್ಥಳಕ್ಕೆ ಬರಲೇ ಇಲ್ಲ.

ಈ ವೇಳೆ, ಸೋಂಕಿತ ವ್ಯಕ್ತಿ ಕುಳಿತಲ್ಲಿಯೇ ನೆಲಕ್ಕುರುಳಿದ್ದಾರೆ. ಬಳಿಕ ಕುಟುಂಬಸ್ಥರು ನೋಡಿದಾಗ ಉಸಿರಾಟ ನಿಂತು, ಮೃತಪಟ್ಟಿರುವುದು ತಿಳಿದುಬಂದಿದೆ. ಮೃತದೇಹವನ್ನು ಶ್ರೀನಗರದ ರಾಮಾಂಜನೇಯ ದೇವಸ್ಥಾನದ ಬಳಿಯ ರಸ್ತೆ ಮೇಲೆ ಇಟ್ಟು ಕಣ್ಣೀರು ಹಾಕುತ್ತಿದ್ದರೂ ಯಾವೊಬ್ಬ ಅಧಿಕಾರಿ, ಸಿಬ್ಬಂದಿಯೂ ಇತ್ತ ತಲೆ ಕೂಡ ಹಾಕಿಲ್ಲ. ಮಳೆಯಲ್ಲಿಯೇ ಮೃತದೇಹ ನೆನೆಯುತ್ತಾ ಮೂರು ಗಂಟೆಗಳ ಕಾಲ ನಡುರಸ್ತೆಯಲ್ಲಿ ಇತ್ತು.

ಕೋವಿಡ್​ನಿಂದ ಜನರ ರಕ್ಷಣೆಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ಮಾಧ್ಯಮಗಳ ಮುಂದೆ ದೊಡ್ಡದಾಗಿ ಹೇಳಿಕೊಳ್ಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಈಗ ಎಲ್ಲಿ ಹೋಗಿದ್ದಾರೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕೊರೋನಾ ಇದೆ, ಆಸ್ಪತ್ರೆಗೆ ಸೇರಿಸಿ ಎಂದು ಸ್ವತಃ ಸೋಂಕಿತ ವ್ಯಕ್ತಿಯೇ ಮನವಿ ಮಾಡಿಕೊಂಡ ಮೇಲೂ ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ಕರೆದುಕೊಂಡು ಹೋಗದೆ ನಡುರಸ್ತೆಯಲ್ಲಿಯೇ ಪ್ರಾಣ ಹೋಗಲು ಕಾರಣವಾದ ಹಾಗೂ ರಸ್ತೆಯಲ್ಲಿಯೇ ಮೃತದೇಹ ಗಂಟೆಗಟ್ಟಲೇ ಮಳೆಯಲ್ಲಿ ನೆನೆಯುವಂತೆ ಮಾಡಿದ ಅಧಿಕಾರಿಗಳ ಬೇಜಬಾವ್ದಾರಿತನಕ್ಕೆ ಹೊಣೆ ಯಾರು?

Comments are closed.