ಬೆಂಗಳೂರು(ಜು.09): ರಾಜೀನಾಮೆ ನೀಡಿ ಪ್ರತಿಭಟನೆಗೆ ಮುಂದಾಗಿದ್ದ 508 ಗುತ್ತಿಗೆ ವೈದ್ಯರ ಖಾಯಮಾತಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ಷರತ್ತುಬದ್ಧ ಒಪ್ಪಿಗೆ ನೀಡಿದೆ. ರಾಜ್ಯದಲ್ಲಿ ಬಂಡವಾಳ ಹೂಡಲು ಅನುಕೂಲವಾಗುವಂತೆ ಮಧ್ಯವರ್ತಿಯಾಗಿ ಹಾಗೂ ಜ್ಞಾನಾಧಾರಿತ ಸಹಯೋಗಕ್ಕಾಗಿ ಖಾಸಗಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಪ್ರೈವೇಟ್ ಲಿಮಿಟೆಡ್ ಏಜೆನ್ಸಿಯನ್ನು 12 ಕೋಟಿ ರೂ. 12 ತಿಂಗಳು ಮುಂದುವರೆಸಲು ಸಂಪುಟ ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದೆ. ಅದೇ ರೀತಿ 184.37 ಕೋಟಿ ರೂ ಮೊತ್ತದಲ್ಲಿ ಇ-ಪ್ರೊಕ್ಯೂರ್ಮೆಂಟ್ 2.0 ಯೋಜನೆಯನ್ನು ‘ಅಭಿವೃದ್ದಿ ಮತ್ತು ಅನುಷ್ಠಾನ’ಕ್ಕೆ ತರಲು ಸಾರ್ವಜನಿಕ-ಸರ್ಕಾರಿ ಸಹಭಾಗಿತ್ವದಲ್ಲಿ ಮಾದರಿ ರೂಪಿಸಲು ಏಳು ವರ್ಷಗಳಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ರಾಜ್ಯ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಗುತ್ತಿಗೆ ವೈದ್ಯರ ನೇಮಕಾತಿ ಕುರಿತು ಚರ್ಚಿಸಲಾಗಿದೆ. ವೈದ್ಯರು ಸಲ್ಲಿಸಿರುವ ಸೇವಾ ಅವಧಿ ಆಧಾರದ ಮೇರೆ ಖಾಯಂ ಮಾಡಲಿದ್ದೇವೆ. ಪ್ರತಿ ಆರು ತಿಂಗಳು ಸೇವಾ ಅವಧಿಗೆ 2.5 ಕೃಪಾಂಕ ನೀಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.
ವಿದ್ಯುತ್ ಕಂಪನಿಗಳಿಗೆ ಬಡ್ಡಿ ರಹಿತ 2500 ಕೋಟಿ ರೂ. ಸಾಲ ಮಂಜೂರು ಮಾಡಲಾಗುವುದು. 200 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಪ್ರಾರಂಭಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೈ ಫ್ಲೋ ಆಕ್ಸಿಜನ್ ಸಿಸ್ಟಮ್, ಬೆಡ್ ವ್ಯವಸ್ಥೆಗೆ ಹಣ ಮಂಜೂರು, ಜಿಲ್ಲಾ ಆಸ್ಪತ್ರೆಗಳಿಗೆ 207 ಕೋಟಿ ರೂ. ಹಣ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ. ತುರ್ತು ಕೆಲಸಗಳಿಗೆ 95 ಕೋಟಿ ಹಣ ಬಿಡುಗಡೆಗೆ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ಕೆಪಿಎಸ್ಸಿ ಸದಸ್ಯ ಲಕ್ಷ್ಮೀನರಸಯ್ಯ ಅವರು ಜುಲೈ 13 ರಂದು ನಿವೃತ್ತಿಯಾಗಲಿದ್ದು, ಆ ಹುದ್ದೆ ತುಂಬಲು ಸಿಎಂಗೆ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಎಪಿಎಂಸಿಗಳಲ್ಲಿ 1.5 ಸೆಸ್ ಕಲೆಕ್ಟ್ ಮಾಡುತ್ತಿದ್ದೇವೆ. ಅಮೆಂಡ್ ಮೆಂಟ್ ಈಗಾಗಲೇ ತರಲಾಗಿದೆ. ಶೇ.1ರಷ್ಟು ಸೆಸ್ ಇಳಿಕೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ನಾಲ್ಕು ವರ್ಷಗಳಲ್ಲಿ 44 ಕೋಟಿ ರೂ. ಒದಗಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾ ಕೇಸ್ ಹೆಚ್ಚಾಗಲು ಕಾರಣವೇನು ಗೊತ್ತೇ? – ಇಲ್ಲಿದೆ ಆತಂಕಕಾರಿ ಮಾಹಿತಿಹೀಗೆ ಮುಂದುವರಿದ ಅವರು, ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಪ್ರಾಥಮಿಕ ವಿಚಾರಣೆಯನ್ನು 90 ದಿನದಲ್ಲಿ ಮುಗಿಸಬೇಕು. ಆರು ತಿಂಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಎರಡನ್ನು ಕಡ್ಡಾಯಗೊಳಿಸಿ ಲೋಕಾಯುಕ್ತ ಕಾಯ್ದೆ ಸೆಕ್ಷನ್ 9ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಕೋವಿಡ್ನಿಂದ ಸಮಸ್ಯೆಗೊಳಗಾದವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಆಪತ್ಕಾಲೀನಿ ನಿಧಿಯನ್ನು 50 ಕೋಟಿ ರೂ.ಗಳಿಂದ 500 ಕೋಟಿ ರೂ.ಗೆ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನವಾಗಿದೆ. ಇದಕ್ಕಾಗಿ ಸುಗ್ರೀವಾಜ್ಞೆಯನ್ನು ತಂದಿದ್ದೇವೆ ಎಂದು ಮಾಹಿತಿ ನೀಡಿದರು.
Comments are closed.