ಕರ್ನಾಟಕ

ಬೆಂಗಳೂರು ಬಿಟ್ಟು ಊರಿಗೆ ಹೋಗಬೇಡಿ: ಯಡಿಯೂರಪ್ಪ ಮನವಿ!

Pinterest LinkedIn Tumblr


ಬೆಂಗಳೂರು: ನಗರವನ್ನು ಬಿಟ್ಟು ಯಾರೂ ಕೂಡ ಹಳ್ಳಿಗಳಿಗೆ ತೆರಳಬೇಡಿ. ಕೊರೊನಾ ವೈರಸ್‌ ನಿಯಂತ್ರಿಸಲು ನಮ್ಮೊಂದಿಗೆ ಸಹಕರಿಸಿ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರು ಬೆಂಗಳೂರು ತೊರೆಯುತ್ತಿರುವ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ಗುರುವಾರ ಬೆಂಗಳೂರು ಅಂತಾರಾಷ್ಟ್ರೀ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಯಾರೊಬ್ಬರೂ ಬೆಂಗಳೂರನ್ನು ತೊರೆದು ಹಳ್ಳಿಗಳಿಗೆ ಹೋಗಬೇಡಿ. ಇದರಿಂದ ನಮ್ಮ ಹಳ್ಳಿಗಳಿಗೂ ಸೋಂಕು ಹರಡುವ ಸಾಧ್ಯತೆಗಳಿವೆ. ಸೋಂಕನ್ನು ನಿಯಂತ್ರಸಲು ನಮ್ಮೊಂದಿಗೆ ಸಹಕರಿಸಿ. ಸಚಿವರು ಮತ್ತು ಶಾಸಕರು ಕೊರೊನಾ ಸೋಂಕು ನಿವಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕೋರಿದ್ದಾರೆ.

ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರೂ ಕೂಡ ಬೆಂಗಳೂರು ತೊರೆ ಹಳಿಗೆ ಹೋಗದಂತೆ ಕೋರಿದ್ದಾರೆ. ನೆರೆ ರಾಜ್ಯಗಳ ಹೈದರಾಬಾದ್, ಚೆನ್ನೈ, ಮುಂಬಯಿ ಮತ್ತಿತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೀಗಾಗಿ ಯಾರೂ ಅಧೈರ್ಯದಿಂದ ನಗರ ಬಿಟ್ಟು ತಮ್ಮ ಊರುಗಳ ಕಡೆ ಹೋಗುವುದು ಬೇಡ ಎಂದಿದ್ದಾರೆ.

ಮುಖ್ಯಮಂತ್ರಿಯ ಮನವಿಯನ್ನು ಗಮನಿಸಿದರೆ, ಬೆಂಗಳೂರಿನಲ್ಲಿ ಕೊರೊನಾ ಸೋಂಕು ಸಮುದಾಯ ಮಟ್ಟಕ್ಕೆ ಹರಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು. ಹೀಗಾಗಿ ಬೆಂಗಳೂರಿನ ಜನತೆ ಮತ್ತಷ್ಟು ಜಾಗೃತರಾಗಿ ಕೊರೊನಾ ವಿರುದ್ಧ ಹೋರಾಡಲು ಸಿದ್ಧರಾಗಬೇಕಿದೆ. ಈಗಾಗಲೇ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಯನ್ನು ಜುಲೈ 31ರವರೆಗೆ ಸೀಲ್‌ಡೌನ್‌ ಮಾಡಲಾಗಿದೆ.

ಸರಕಾರ ಏನೇ ಕ್ರಮ ಕೈಗೊಂಡರು ಸೋಂಕು ಹರಡದಂತೆ ತಡೆಯುವುದು ಅಂತಿಮವಾಗಿ ಜನರ ಕೈಯಲ್ಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಪಾಡುವುದೊಂದೇ ಇದಕ್ಕೆ ಪರಿಹಾರವಾಗಿದೆ. ಕೊರೊನಾ ವ್ಯಾಕ್ಸಿನ್‌ ಬರುವವರೆಗೆ ನಮ್ಮ ಜೀವ ಉಳಿಸಬೇಕಾದರೆ, ಈ ಸಂದರ್ಭದಲ್ಲಿ ನಾವು ಜವಾಬ್ದಾರಿಯುತವಾಗಿ ವರ್ತಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಹಳ್ಳಿಗಳಿಗೆ ಸೋಂಕು ಹರಡದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Comments are closed.