ಕರ್ನಾಟಕ

ಮಲೆನಾಡಿನಲ್ಲಿ ಮುಂದುವರೆದ ಮಳೆ, ಉಕ್ಕಿ ಹರಿದ ನದಿಗಳು

Pinterest LinkedIn Tumblr


Monsoon 2020: ಬೆಂಗಳೂರು (ಜು.9): ಈ ತಿಂಗಳ ಆರಂಭದಿಂದ ಮುಂಗಾರು ಮಳೆ ಚುರುಕು ಕಂಡಿದ್ದು, ರೈತರು ಸಂತಸಗೊಂಡಿದ್ದಾರೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಸಣ್ಣ ಪ್ರಮಾಣದ ಮಳೆ ಒಂದೇ ಸಮನೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ.

ದಕ್ಷಿಣ ಕನ್ನಡ, ಮಂಗಳೂರು, ಬೆಳ್ತಂಗಡಿ, ಉಡುಪಿ, ಕುಮಟ, ಕಾರವಾರ, ಶಿರಸಿ, ಸಾಗರ ಹಾಗೂ ಶಿವಮೊಗ್ಗ ಭಾಗದಲ್ಲಿ ಸಾಧಾರಣ ಮಳೆ ಆಗುತ್ತಿದೆ. ಕೆಲವು ಭಾಗದಲ್ಲಿ ಮಳೆ ಬಿಟ್ಟು ಬಿಟ್ಟು ಬಂದರೆ, ಇನ್ನೂ ಕೆಲ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಲೇ ಇದೆ.

ಜೂನ್​ ತಿಂಗಳಲ್ಲಿ ಮಳೆ ಇಲ್ಲದ ಕಾರಣ ಕೃಷಿ ಚಟುವಟಿಕೆ ನಿಂತಿತ್ತು. ಈಗ ಭತ್ತದ ನಾಟಿ ಸೇರಿ ಮೊದಲಾದ ಕಾರ್ಯಗಳು ಭರದಿಂದ ಸಾಗಿವೆ. ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಬೆಳಗಾವಿ ಸೇರಿ ಕೆಲವು ಭಾಗಗಳಲ್ಲಿ ತುಂತುರು ಮಳೆ ಆಗುತ್ತಿದೆ.

ಕೊಡಗು ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಕೆಲ ಭಾಗಗಳಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ.

ಉಕ್ಕಿ ಹರಿದ ನದಿಗಳು:ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ. ಹೀಗಾಗಿ, ನದಿ ಅಂಚಿನ ಗ್ರಾಮಗಳು ಕಂಗಾಲಾಗಿವೆ. ಈಗಾಗಲೇ ಈ ಭಾಗದಲ್ಲಿರುವ ಜನರನ್ನು ಸ್ಥಳಾಂತರ ಮಾಡಲು ಆಯಾ ಜಿಲ್ಲೆಗಳು ಚಿಂತನೆ ನಡೆಸಿವೆ. ಅಘನಾಶಿನಿ, ಗಂಗಾವಳಿ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನದಿಗಳ ಮಟ್ಟ ಹೆಚ್ಚಾಗಿದ್ದು, ಕೆಲ ಮನೆಗಳು ಕುಸಿದಿವೆ. ಕೆಲವು ಕಡೆಗಳಲ್ಲಿ ಶಾಲೆಗಳಿಗೆ ಹಾನಿಯಾದ ಬಗ್ಗೆಯೂ ವರದಿ ಆಗಿದೆ.

ಭಾನುವಾರದವರೆಗೂ ಮುಂದುವರಿಯಲಿದೆ ಮಳೆ:

ಇಂದಿನಿಂದ 2-3 ದಿನಗಳ ಕಾಲ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮೇ ಕೊನೆಯಲ್ಲಿ ಹಾಗೂ ಜೂನ್ ಆರಂಭದಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ಆದರೆ, ಈಗ ಮತ್ತೆ ಮಳೆ ಆಗುತ್ತಿರುವದರಿಂದ ರೈತರಲ್ಲಿ ಆಶಾಭಾವ ಮೂಡಿಸಿದೆ.

ಇಂದು ಯಾವ ಜಿಲ್ಲೆಯಲ್ಲಿ ಯಾವ ರೀತಿಯ ವಾತಾವರಣವಿದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ:

ಬೆಂಗಳೂರು- ಮೋಡ ಕವಿದ ವಾತಾವರಣ
ಉಡುಪಿ- ಸಾಧಾರಣ ಮಳೆ
ದಕ್ಷಿಣ ಕನ್ನಡ- ಮಳೆ
ಕೋಲಾರ- ಮೋಡ ಕವಿದ ವಾತಾವರಣ
ಕಲಬುರ್ಗಿ- ಮೋಡ ಕವಿದ ವಾತಾವರಣ
ವಿಜಯಪುರ- ಮೋಡ ಕವಿದ ವಾತಾವರಣ
ಬಾಗಲಕೋಟೆ- ಮೋಡ ಕವಿದ ವಾತಾವರಣ
ಧಾರವಾಡ- ಮೋಡ ಕವಿದ ವಾತಾವರಣ
ರಾಯಚೂರು- ಬಿಸಿಲು
ಗದಗ- ಮೋಡ ಕವಿದ ವಾತಾವರಣ
ಹುಬ್ಬಳ್ಳಿ- ಮೋಡ ಕವಿದ ವಾತಾವರಣ
ದೊಡ್ಡಬಳ್ಳಾಪುರ-ಮೋಡ ಕವಿದ ವಾತಾವರಣ
ಬೆಳಗಾವಿ- ತುಂತುರು ಮಳೆ

Comments are closed.