ಬೆಂಗಳೂರು: ಕೇರಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ ನಾಲ್ಕನೇ ಆರೋಪಿ ಸಂದೀಪ್ ನಾಯರ್ ಕೂಡ ಬಂಧಿತನಾಗಿದ್ದಾನೆ. ಇಬ್ಬರನ್ನೂ ಭಾನುವಾರ ಕೊಚ್ಚಿಗೆ ಕರೆದೊಯ್ಯಲಾಗುತ್ತದೆ. ಎನ್‌ಐಎ ಅಧಿಕಾರಿಗಳು ಮೊದಲಿಗೆ ಸ್ವಪ್ನಾ ವಿಚಾರಣೆ ನಡೆಸಲಿದ್ದಾರೆ, ನಂತರ ಹೆಚ್ಚಿನ ವಿಚಾರಣೆಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.
ಯುಎಇ ಧೂತಾವಾಸ ಕಚೇರಿಯ ಮಾಜಿ ಉದ್ಯೋಗಿ ಸ್ವಪ್ನಾಳನ್ನು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಿಂದ ಬಂಧಿಸಲಾಗಿದೆ. ಬಂಧನದ ವೇಳೆ ಆಕೆಯ ಪತಿ ಹಾಗೂ ಪುತ್ರಿ ಜೊತೆಗಿದ್ದರು ಎಂದು ತಿಳಿದು ಬಂದಿದೆ. ಫೋನ್ ಕಾಲ್ ಬೆನ್ನತ್ತಿ ಎನ್‌ಐಎ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸರಿತ್ ಬಂಧನದ ವೇಳೆ ಆಕೆ ತಿರುವನಂತಪುರಂನಲ್ಲೇ ಇದ್ದಳು ಎನ್ನಲಾಗಿದೆ. ಅಲ್ಲಿಂದ ಆಕೆ ಕೊಚ್ಚಿಗೆ ಬಂದು ನಂತರ ಬೆಂಗಳೂರಿಗೆ ಬಂದದ್ದಳು ಎಂಬ ವರದಿಗಳಿವೆ. ಈ ಬಂಧನದ ಬೆನ್ನಿಗೆ ಕೇರಳದಲ್ಲಿ ರಾಜಕೀಯ ಬೆಳವಣಿಗೆಗಳು ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದೆ. ಈಕೆ ಬಂಧನಕ್ಕೂ ಮೊದಲು ರಾಜ್ಯ ಐಟಿ ಇಲಾಖೆಯಲ್ಲಿ ಕೆಲಸಕ್ಕಿದ್ದಳು. ಅಲ್ಲಿ ಈಕೆಗೆ ತಿಂಗಳಿಗೆ 1.5 ಲಕ್ಷ ರೂ. ಸಂಬಳ ನೀಡಲಾಗುತ್ತಿತ್ತು.
ಶುಕ್ರವಾರವಷ್ಟೆ ರಾಷ್ಟ್ರೀಯ ತನಿಖಾ ದಳ ಪ್ರಕರಣದ ತನಿಖೆಯನ್ನು ಕೈಗತ್ತಿಕೊಂಡಿತ್ತು. ತನಿಖೆ ಕೈಗೆತ್ತಿಕೊಂಡ ಒಂದು ದಿನದ ಅಂತರದಲ್ಲೇ ಈಕೆಯನ್ನು ಬಂಧಿಸಲಾಗಿದೆ. ಇನ್ನೊಂದು ಕಡೆ ತಿರುವನಂತಪುರಂನಲ್ಲಿರುವ ಸಂದೀಪ್ ನಾಯರ್ ಮನೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
Comments are closed.