ಬೆಂಗಳೂರು(ಜು.12): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಜೈಲಿನ ವಿಶೇಷ ಸೆಲ್ ನಲ್ಲಿ ಕ್ವಾರಂಟೈನ್ ಇದ್ದ 30 ಮಂದಿ ಆರೋಪಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿ ಇತ್ತೀಚಿಗೆ ಜೈಲು ಸೇರಿದ್ದ ಸುಮಾರು 400 ವಿಚಾರಣಾಧೀನ ಖೈದಿಗಳನ್ನ ಪ್ರತ್ಯೇಕವಾಗಿ ವಿಶೇಷ ಸೆಲ್ ನಲ್ಲಿ ಇರಿಸಲಾಗಿತ್ತು. ಎಲ್ಲಾ ಆರೋಪಿಗಳನ್ನ ಕ್ವಾರಂಟೈನ್ ನಲ್ಲಿಟ್ಟು ತೀವ್ರ ನಿಗಾ ವಹಿಸಲಾಗಿತ್ತು. 150 ಆರೋಪಿಗಳ ರ‍್ಯಾಂಡಮ್ ಟೆಸ್ಟ್ ಮಾಡಿದ ವೇಳೆ ಅದರಲ್ಲಿ 30 ಮಂದಿ ಆರೋಪಿಗಳಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಸೋಂಕಿತ ವಿಚಾರಣಾಧೀನ ಕೈದಿಗಳನ್ನ ಐಸೋಲೇಷನ್ ಆಸ್ಪತ್ರೆಗೆ ರವಾನಿಸಲಾಗಿದ್ದು ಆರೋಪಿಗಳಿದ್ದ ವಿಶೇಷ ಸೆಲ್ನ್ನು ಸ್ಯಾನಿಟೈಸ್ ಮಾಡಲಾಗಿದೆ.
ಇನ್ನು, ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದ ಜೈಲು ಸಿಬ್ಬಂದಿಗೂ ಕೊವೀಡ್ ಟೆಸ್ಟ್ ಮಾಡಿಸಲು ಜೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆರೋಪಿಗಳಿಗೆ ಊಟೋಪಚಾರ, ಉಸ್ತುವಾರಿ ಸೇರಿ ಹಲವು ಕೆಲಸ ಕಾರ್ಯಗಳಲ್ಲಿ ಜೈಲು ಸಿಬ್ಬಂದಿ ತೊಡಗಿದ್ದರು. ಅದರಿಂದ ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಸಿಬ್ಬಂದಿಗೆ ಕೊರೋನಾ ಟೆಸ್ಟ್ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ ವಾರವಷ್ಟೆ 20 ವಿಚಾರಣಾಧೀನ ಕೈದಿಗಳಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿತ್ತು. ಇದೀಗ ಮತ್ತೆ 30 ಜನರಿಗೆ ಪಾಸಿಟಿವ್ ವರದಿಯಾಗಿದ್ದು ಆಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಮಾಹಾಮಾರಿ ಕೊರೋನಾ ಸೋಂಕು ಹರಡದಂತೆ ತಡೆಯಲು ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆಗಳನ್ನ ಕೈಗೊಳ್ಳಲಾಗಿದೆ.
ಆದರೂ ವಿಚಾರಣಾಧೀನ ಕೈದಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಅದು ಕೇಂದ್ರ ಕಾರಾಗೃಹದತ್ತ ಹರಡದಂತೆ ನಿಗಾ ವಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಜೈಲಿನಲ್ಲಿ ನಾಲ್ಕೈದು ಸಾವಿರ ಸಜಾಬಂಧಿ ಕೈದಿಗಳಿದ್ದು, ಒಂದೆಡೆ ಸೋಂಕು ಸಹ ಹೆಚ್ಚಾಗುತ್ತಿದೆ. ಅದರಿಂದ ಉಳಿದ ಕೈದಿಗಳಿಗೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಜೈಲು ಸಿಬ್ಬಂದಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತಾಗಿದೆ.
Comments are closed.