ಬೆಂಗಳೂರು(ಜು.12): ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ವೇಳೆಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಹಲವಾರು ಮಂದಿ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ಇಂದು ಓರ್ವ ಸೋಂಕಿತ ಮಹಿಳೆಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದ ಹಿನ್ನೆಲೆ ಆಕೆ ಸಾವನ್ನಪ್ಪಿದ್ದಾಳೆ.
ವಿಕ್ಟೋರಿಯಾ ಆಸ್ಪತ್ರೆಯ ಗೇಟ್ ಮುಂದೆಯೇ ನರಳಿ ನರಳಿ ಆ ಮಹಿಳೆ ಪ್ರಾಣ ಬಿಟ್ಟಿದ್ದಾರೆ. ಉಸಿರಾಟದ ತೊಂದರೆ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಬಂದಾಗ ಅಲ್ಲಿನ ಸಿಬ್ಬಂದಿ ಬೆಡ್ ಇಲ್ಲವೆಂದು ಸೋಂಕಿತೆಯನ್ನು ಸೇರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.
ಮೃತ ಮಹಿಳೆ ಉಸಿರಾಟದ ತೊಂದರೆ ಎಂದಾಗ ಕೊರೋನಾ ಇರಬಹುದೆಂಬ ಶಂಕೆಯಿಂದ ಪರೀಕ್ಷೆ ಮಾಡಿಸಿ, ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಎಂದು ಖಾಸಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ದೇವನಹಳ್ಳಿಯ ಆಕಾಶ್ ಆಸ್ಪತ್ರೆ ವಿಕ್ಟೋರಿಯಾ,ಕಿಮ್ಸ್ ಆಸ್ಪತ್ರೆಗೆ ಹೋದರೂ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಮಹಿಳೆಯನ್ನು ಅಲೆಸಿದ್ದಾರೆ. ಆಕೆಯ ಕುಟುಂಬಸ್ಥರು ಬೆಳಗಿನ ಜಾವ 2 ಗಂಟೆಯಿಂದ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗಾಗಿ ಅಲೆದಿದ್ದಾರೆ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ ಚಿಕಿತ್ಸೆ ಸಿಗದೆ ಮುಂಜಾನೆ 4 ಗಂಟೆಗೆ ಗೇಟ್ ಮುಂದೆಯೇ ನರಳಿ ನರಳಿ ಪ್ರಾಣಬಿಟ್ಟಿದ್ದಾಳೆ.
ಮಹಿಳೆ ಬದುಕಿದ್ದಾಗ ಆಸ್ಪತ್ರೆಗಳು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿವೆ. ಗೇಟ್ ಮುಂದೆಯೇ ಸಾವನ್ನಪ್ಪಿದ ಬಳಿಕ ಸಿಬ್ಬಂದಿ ಮಹಿಳೆಯ ಶವವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಣ್ಣ ಮುಂದೆಯೇ ಬದುಕಿದ್ದಾಗ ಬೆಡ್ ಇಲ್ಲ ಎಂದ ಸಿಬ್ಬಂದಿ, ಸತ್ತ ಬಳಿಕ ಶವವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈಗ ಕೋವಿಡ್ ಟೆಸ್ಟ್ ಮಾಡಿಸಲು ಶವ ರವಾನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿನ್ನೆ ಒಂದೇ ದಿನ ನಗರದಲ್ಲಿ 1,533 ಜನರಿಗೆ ಸೋಂಕು ಖಚಿತಪಟ್ಟಿದೆ. ಇಲ್ಲಿ ಸಾವಿನ ಸಂಖ್ಯೆ 229 ತಲುಪಿದೆ. ನಗರದಲ್ಲಿ ಈವರೆಗೆ ದಾಖಲಾಗಿರುವುದು 16,862 ಪ್ರಕರಣಗಳು. ದೇಶದ ಇತರ ಪ್ರಮುಖ ಮಹಾನಗರಗಳೊಂದಿಗೆ ಪೈಪೋಟಿಗೆ ಬಿದ್ದಿದೆ. ಮುಂಬೈ ಮತ್ತು ಚೆನ್ನೈ ನಗರಗಳನ್ನ ಮೀರಿಸಿ ಬೆಂಗಳೂರಿನಲ್ಲಿ ಮಹಾಮಾರಿ ವ್ಯಾಪಿಸುತ್ತಿದೆ.
Comments are closed.