ಕರ್ನಾಟಕ

ಮಂಗಳವಾರದಿಂದ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್‌: ಬೆಂಗಳೂರಿನಿಂದ ಗಂಟು-ಮೂಟೆ ಕಟ್ಟಿದ ಜನ

Pinterest LinkedIn Tumblr


ನೆಲಮಂಗಲ (ಬೆಂಗಳೂರುಗ್ರಾಮಾಂತರ): ರಾಜ್ಯ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದಂತೆ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ, ಶನಿವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೂ ಲಾಕ್‌ಡೌನ್‌ ಇದೆ. ಜೊತೆಯಲ್ಲೇ ಮಂಗಳವಾರದಿಂದ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್‌ ಜಾರಿಗೆ ಬರಲಿದೆ. ಹೀಗಾಗಿ, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಜನರು ಕಂಗಾಲಾಗಿದ್ದಾರೆ.

ಶನಿವಾರ ರಾತ್ರಿಯಿಂದ ಲಾಕ್‌ಡೌನ್‌ ಇರುತ್ತೆ ಎಂದು ಗೊತ್ತಿದ್ದ ಕಾರಣ, ಜನರು ಶುಕ್ರವಾರದಿಂದಲೇ ಬೆಂಗಳೂರಿನಿಂದ ತಮ್ಮ ತವರಿನತ್ತ ಮರಳಲು ಆರಂಭಿಸಿದ್ದರು. ಇದೀಗ ಮಂಗಳವಾರದಿಂದ ಮತ್ತೆ ಒಂದು ವಾರ ಲಾಕ್‌ಡೌನ್‌ ಇರುವ ಕಾರಣ, ಇನ್ನಷ್ಟು ಜನರು ಬೆಂಗಳೂರು ಬಿಡಲು ಸಿದ್ದತೆ ನಡೆಸಿದ್ದಾರೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಜನ, ಮತ್ತೆ ಹುಟ್ಟೂರಿನ ಕಡೆ ಪಯಣ ಆರಂಭಿಸಿದ್ದಾರೆ.

ಬೆಂಗಳೂರಿನ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದ ಜನರು, ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶುಕ್ರವಾರ ಹಾಗೂ ಶನಿವಾರದಂದು ಮನೆಯ ಎಲ್ಲಾ ಸಾಮಗ್ರಿಗಳನ್ನು ಗಂಟು ಮೂಟೆ ಕಟ್ಟಿಕೊಂಡು ವಾಹನಗಳ ಸಮೇತ ಊರುಗಳಿಗೆ ಹೋಗುತಿರುವುದು ಕಂಡುಬಂತು.

ಬಾಡಿಗೆ ಕಟ್ಟಿಲ್ಲ ಸರ್: ಲಾಕ್‌ಡೌನ್‌ ಆರಂಭದಿಂದ ಹಿಡಿದು ಮುಕ್ತಾಯವಾದ ನಂತರವೂ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಕೆಲಸಗಳು ಸಿಗುತಿಲ್ಲ, ವ್ಯಾಪಾರವಾಗುತಿಲ್ಲ, ಬಾಡಿಗೆ ಮನೆಗೆ ನೀಡಿದ್ದ ಅಡ್ವಾನ್ಸ್ ಹಣ ಬಾಡಿಗೆ ಹಣಕ್ಕೆ ವಜಾ ಮಾಡಲಾಗಿದೆ. ಈ ತಿಂಗಳ ಬಾಡಿಗೆ ನೀಡಿ ಇಲ್ಲವಾದ್ರೆ ಖಾಲಿ ಮಾಡಿ ಎಂದರು. ಹೊಟ್ಟೆಗೆ ಅನ್ನ ಹುಟ್ಟಿಸಿಕೊಳ್ಳೋದೇ ಕಷ್ಟವಾಗಿರುವ ಸನ್ನಿವೇಶದಲ್ಲಿ ಬಾಡಿಗೆ ಕಟ್ಟಲು ಹೇಗೆ ಸಾಧ್ಯ? ಹೀಗಾಗಿ ಊರಿಗೆ ಹೋಗುತಿದ್ದೇವೆ ಎಂದು ಜನರು ಅಳಲು ತೋಡಿಕೊಂಡರು.

ಕೂಲಿ ಮಾಡೋಣ: ಬೆಂಗಳೂರಿನಲ್ಲಿ ವ್ಯಾಪಾರ ಅಥವಾ ಕೆಲಸ ಮಾಡೋಣ ಎಂದು ಬಂದೆವು. ಆದ್ರೆ, ಕೊರೊನಾದಿಂದಾಗಿ ಸಮಸ್ಯೆಯಾಗಿದೆ. ಸತ್ತ ಮೇಲೆ ಮನೆ ಸೇರುವ ಬದಲು ಮೊದಲೇ ಮನೆಗೆ ಹೋದರೆ ಸುರಕ್ಷತೆ ಇರುತ್ತದೆ. ಅಲ್ಲಿಯೇ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತೇವೆ ಎನ್ನುತ್ತಾರೆ, ಕೆಲವರು.

ಎಚ್ಚರ ವಹಿಸಿ: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ, ಸೋಂಕಿತರ ಸಂಪರ್ಕದಲ್ಲಿದ್ದವರ ವಿವರಗಳು ಸರಿಯಾಗಿ ಸಿಗುತಿಲ್ಲ. ಇಂತಹ ಸಂದರ್ಭದಲ್ಲಿ ಜನರು ಯಾವುದೇ ಪರೀಕ್ಷೆ ಇಲ್ಲದೆ ಹಳ್ಳಿಗಳಿಗೆ ಹೋಗುತ್ತಿರುವುದರಿಂದ ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯಿತಿಗಳು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.

Comments are closed.