ಬೆಂಗಳೂರು(ಜು.13): ರಾಜ್ಯದಲ್ಲಿ ಕೊರೋನಾ ಸೋಂಕು ಮಿತಿಮೀರಿ ಹರಡುತ್ತಿದೆ. ಹೀಗಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನು ಒಂದು ವಾರ ಕಾಲ ಲಾಕ್ಡೌನ್ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದರು. ಆದರೀಗ, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನ ಒಂದು ವಾರ ಲಾಕ್ಡೌನ್ ಮಾಡುವ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಜುಲೈ 14ನೇ ತಾರೀಕು ಮಂಗಳವಾರ ರಾತ್ರಿ 8 ಗಂಟೆಯಿಂದಲೇ ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ಈ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಇನ್ನು, ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅಧಿಕೃತ ಆದೇಶ ಪ್ರತಿಯಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೊರೋನಾ ವೈರಸ್ ತಹಬದಿಗೆ ತರಲು ಈ ಲಾಕ್ಡೌನ್ ಸಂದರ್ಭದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೂಲಗಳ ಪ್ರಕಾರ, ಇಡೀ ರಾಜ್ಯವನ್ನೇ ಲಾಕ್ಡೌನ್ ಮಾಡುವ ಆಲೋಚನೆಯೂ ಸರ್ಕಾರಕ್ಕೆ ಇತ್ತು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ನಡೆಸಿದ್ದರು. ಈ ವೇಳೆ, ಲಾಕ್ ಡೌನ್ ಕ್ರಮದ ಕುರಿತ ಗಂಭೀರ ಸಮಾಲೋಚನೆ ನಡೆಸಿದರು. ಯಡಿಯೂರಪ್ಪ ಅವರು ಲಾಕ್ಡೌನ್ ಕುರಿತು ಕೇಂದ್ರ ಸಚಿವರೊಂದಿಗೂ ಸಮಾಲೋಚನೆ ನಡೆಸಿದ್ದರು. ಎಂಟು ವಲಯಗಳ ಸಚಿವರು ಪ್ರತ್ಯೇಕವಾಗಿ ಶಾಸಕರು ಮತ್ತು ಪಾಲಿಕೆ ಸದಸ್ಯರ ಜೊತೆ ಚರ್ಚೆ ನಡೆಸಿ ತಮ್ಮ ಸಲಹೆಗಳನ್ನ ಮುಖ್ಯಮಂತ್ರಿಗೆ ತಿಳಿಸಿದ್ದರು. ಜೊತೆಗೆ ತಜ್ಞರ ಜೊತೆ ಸಿಎಂ ಚರ್ಚೆ ನಡೆಸಿದ್ದರು. ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಾಧಕ ಬಾಧಕಗಳನ್ನ ಸಿಎಂ ಪರಾಮರ್ಶೆ ಮಾಡಿದ್ದರು. ಅವರೆಲ್ಲರ ಅಭಿಪ್ರಾಯ ಪಡೆದ ನಂತರ ಯಡಿಯೂರಪ್ಪ ಅವರು ಲಾಕ್ಡೌನ್ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದರೆನ್ನಲಾಗಿದೆ.
ಲಾಕ್ಡೌನ್ ವಿಚಾರದಲ್ಲೂ ಸರ್ಕಾರ ವಿವಿಧ ಆಯಾಮಗಳಲ್ಲಿ ಆಲೋಚಿಸಿದೆ. ಅತಿ ಹೆಚ್ಚು ಕೊರೋನಾ ಸೋಂಕು ಹರಡುತ್ತಿರುವ ಬೆಂಗಳೂರು ನಗರವನ್ನು ಮಾತ್ರ ಲಾಕ್ಡೌನ್ ಮಾಡುವುದು ಬಹಳ ಪ್ರಮುಖವಾಗಿ ಕೇಳಿಬಂದ ವಿಚಾರವಾಗಿತ್ತು. ಇಡೀ ರಾಜ್ಯವನ್ನೇ ಲಾಕ್ಡೌನ್ ಮಾಡುವ ಪ್ರಸ್ತಾಪವೂ ಇದೆ. ಇದೇ ವೇಳೆ, ಬೆಂಗಳೂರಿನಂತೆ ಕೊರೋನಾ ಸೋಂಕು ಹೆಚ್ಚು ತೀವ್ರತೆ ಇರುವ ಇನ್ನೂ ಮೂರ್ನಾಲ್ಕು ಜಿಲ್ಲೆಗಳನ್ನ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ. ಆಯ್ದ ಜಿಲ್ಲೆಗಳನ್ನ ಲಾಕ್ಡೌನ್ ಮಾಡುವುದು ಹಾಗೂ ಅಂತರಜಿಲ್ಲೆ ಪ್ರಯಾಣವನ್ನು ನಿಷೇಧಿಸುವ ಬಗ್ಗೆಯೂ ಚರ್ಚೆಗಳಾಗಿವೆ.
Comments are closed.