ಕರ್ನಾಟಕ

ಕೊರೋನಾ; ಜಾಗತಿಕವಾಗಿ ಕಂಪನಿಗಳ ಮೇಲೆ ಬಿದ್ದಿರುವ ಸಾಲದ ಹೊರೆ ಎಷ್ಟು ಗೊತ್ತಾ?

Pinterest LinkedIn Tumblr


ಬೆಂಗಳೂರು(ಜುಲೈ 13): ಕೊರೋನಾ ವೈರಸ್ ಬಿಕ್ಕಟ್ಟು ಭಾರತವಷ್ಟೇ ಅಲ್ಲ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಜನಸಾಮಾನ್ಯರ ಜೊತೆ ಕಾರ್ಪೊರೇಟ್ ವಲಯ ಕೂಡ ಜರ್ಝರಿತವಾಗಿದೆ. ಕಂಪನಿಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಬಂಡವಾಳ ಉಳಿಸಿಕೊಳ್ಳಲು ಹಣಕ್ಕಾಗಿ ಪರಿತಪಿಸುತ್ತಿವೆ. ಕಾರ್ಪೊರೇಟ್ ಕಂಪನಿಗಳು ಹಣ ಹೊಂದಿಸುವ ಕಸರತ್ತು ನಡೆಸುತ್ತಲೇ ಇವೆ. ಅಧ್ಯಯನವೊಂದರ ಪ್ರಕಾರ 2020ರಲ್ಲಿ ವಿಶ್ವಾದ್ಯಂತ ವಿವಿಧ ಕಂಪನಿಗಳು ಕೊರೋನಾ ಬಿಕ್ಕಟ್ಟಿನಿಂದ ಹೊರಬರಲು 1 ಟ್ರಿಲಿಯನ್ ಡಾಲರ್ (ಸುಮಾರು 750 ಲಕ್ಷ ಕೋಟಿ ರೂಪಾಯಿ) ಹಣ ಸಾಲದ ಹೊರೆ ಹೊರುತ್ತಿವೆಯಂತೆ. ಇದು ಈಗಾಗಲೇ ಇರುವ ಸಾಲದ ಹೊರೆಯನ್ನು ಶೇ. 12ರಷ್ಟು ಹೆಚ್ಚಿಸುತ್ತದೆ.

ಈ ವರ್ಷದಂದು ಜಾಗತಿಕವಾಗಿ ಕಾರ್ಪೊರೇಟ್ ವಲಯ ಹೊಂದಿರುವ ಸಾಲದ ಮೊತ್ತ 9.3 ಟ್ರಿಲಿಯನ್ ಡಾಲರ್ (ಸುಮಾರು 7000 ಲಕ್ಷ ಕೋಟಿ ರೂಪಾಯಿ) ತಲುಪುವ ನಿರೀಕ್ಷೆ ಇದೆ. ರಾಯ್ಟರ್ಸ್ ಸುದ್ದಿ ಸಂಸ್ಥೆಯ ವರದಿಯಲ್ಲಿ ಈ ಮಾಹಿತಿ ಪ್ರಕಟವಾಗಿದೆ.

ಕಳೆದ ವರ್ಷವೂ ಕೂಡ ಕಾರ್ಪೊರೇಟ್ ವಲಯದ ಸಾಲದ ಪ್ರಮಾಣ ಶೇ. 8ರಷ್ಟು ಹೆಚ್ಚಾಗಿತ್ತು. ವಿವಿಧ ಕಂಪನಿಗಳ ವಿಲೀನ, ಕೊಳ್ಳುವಿಕೆ ಪ್ರಕ್ರಿಯೆ, ಅದಕ್ಕೆ ಬೇಕಾದ ಹಣ ಹೊಂದಿಸುವಿಕೆ ಇತ್ಯಾದಿ ಕಾರಣಕ್ಕೆ ಕಳೆದ ವರ್ಷ ಸಾಲದ ಹೊರೆ ಹೆಚ್ಚಳವಾಗಿತ್ತು. ಆದರೆ, ಈ ವರ್ಷ ಕೊರೋನಾ ವೈರಸ್ ಸೃಷ್ಟಿಸಿದ ಬಿಕ್ಕಟ್ಟು ಅನೇಕ ಕಂಪನಿಗಳ ಬುಡವನ್ನೇ ಅಲುಗಾಡಿಸಿದೆ.

ಜೇನಸ್ ಹೆಂಡರ್ಸನ್ ಎಂಬ ಸಂಸ್ಥೆ ಜಾಗತಿಕ ಕಾರ್ಪೊರೇಟ್ ವಲಯದ ಸಾಲ ಸೂಚಿಯ ವಿಶ್ಲೇಷಣೆ ಮಾಡಿರುವ ಮಾಹಿತಿಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ. “ಕೋವಿಡ್ ಬಿಕ್ಕಟ್ಟು ಎಲ್ಲವನ್ನೂ ಬದಲಿಸಿಬಿಟ್ಟಿದೆ. ಈಗ ಏನಿದ್ದರೂ ಬಂಡವಾಳ ಉಳಿಸಿಕೊಂಡು ಬ್ಯಾಲೆನ್ಸ್ ಶೀಟ್ ಭದ್ರಪಡಿಸಿಕೊಳ್ಳುವ ಕೆಲಸವಾಗಬೇಕಿದೆ” ಎಂದು ಜೇನಸ್ ಹೆಂಡರ್ಸನ್ ಸಂಸ್ಥೆಯ ಪೋರ್ಟ್​ಫೋಲಿಯೋ ಮ್ಯಾನೇಜರ್ ಸೆತ್ ಮೆಯೆರ್ ಹೇಳುತ್ತಾರೆ.

ಎಲ್ಲಿಂದ ಸಾಲ?

ಕೊರೋನಾ ಬಿಕ್ಕಟ್ಟು ಶುರುವಾದ ಜನವರಿ ತಿಂಗಳಿನಿಂದ ಮೇ ತಿಂಗಳವರೆಗೆ ವಿಶ್ವಾದ್ಯಂತ ವಿವಿಧ ಕಂಪನಿಗಳು ಬಾಂಡ್​ ಮಾರುಕಟ್ಟೆಗಳ ಮೂಲಕ 384 ಬಿಲಿಯನ್ ಡಾಲರ್ (ಸುಮಾರು 28 ಲಕ್ಷ ಕೋಟಿ ರೂಪಾಯಿ) ಹಣವನ್ನ ಸಂಗ್ರಹಿಸಿವೆ. ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್​ಗಳಾದ ಯುಎಸ್ ಫೆಡೆರಲ್ ರಿಸರ್ವ್, ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಜಪಾನ್ ಮೊದಲಾದವು ಕಾರ್ಪೊರೇಟ್ ವಲಯದ ಕಂಪನಿಗಳ ಬಂಡವಾಳ ಶೇಖರಣೆಗೆ ಪೂರಕವಾಗಿ ನಿಂತಿವೆ.ವಿಶ್ವ ಕಾರ್ಪೊರೇಟ್ ಸಾಲದಲ್ಲಿ ಅಮೆರಿಕದ್ದು ಸಿಂಹಪಾಲು. ವಿಶ್ವದ 9.3 ಟ್ರಿಲಿಯನ್ ಡಾಲರ್ ಕಾರ್ಪೊರೇಟ್ ಸಾಲದಲ್ಲಿ ಅಮೆರಿಕ ಕಂಪನಿಗಳೇ 3.9 ಟ್ರಿಲಿಯನ್ ಡಾಲರ್ ಸಾಲ ಹೊಂದಿವೆ. ಜರ್ಮನಿ ದೇಶ ಎರಡನೇ ಸ್ಥಾನದಲ್ಲಿವೆ. ಜರ್ಮನಿಯ ಈ ಇಷ್ಟು ದೊಡ್ಡ ಕಾರ್ಪೊರೇಟ್ ಸಾಲದ ಮೊತ್ತಕ್ಕೆ ಪ್ರಮುಖ ಕಾರಣ ವೋಲ್ಸ್​ವ್ಯಾಗನ್ (Volkswagen). ಇದೊಂದೇ ಕಂಪನಿ 192 ಬಿಲಿಯನ್ ಡಾಲರ್ (ಸುಮಾರು 14 ಲಕ್ಷ ಕೋಟಿ ರೂಪಾಯಿ) ಸಾಲ ಹೊಂದಿದೆ.

ಇನ್ನು, ಸಾಲ ಇಲ್ಲದೆ ಹೆಚ್ಚು ಕ್ಯಾಷ್ ರಿಸರ್ವ್ ಹೊಂದಿದ ಕಂಪನಿಗಳೂ ಇವೆ. ಇವುಗಳಲ್ಲಿ ಪ್ರಮುಖವಾದುದು ಗೂಗಲ್ ಸ್ಥಾಪಕ ಆಲ್ಫಬೆಟ್ ಸಂಸ್ಥೆ ಎಂದು ಸೆತ್ ಮೆಯೆರ್ ಹೇಳುತ್ತಾರೆ.

Comments are closed.